ADVERTISEMENT

ಮಾಲಿನ್ಯದಿಂದ ಜಗತ್ತಿನಲ್ಲಿ ಪ್ರತಿವರ್ಷ 90 ಲಕ್ಷ ಜನರ ಸಾವು

ಅಮೆರಿಕದಲ್ಲಿ ನಡೆದ ಅಧ್ಯಯನ ವರದಿಯಲ್ಲಿ ಉಲ್ಲೇಖ

ಪಿಟಿಐ
Published 18 ಮೇ 2022, 13:49 IST
Last Updated 18 ಮೇ 2022, 13:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್ (ಪಿಟಿಐ): ಮಾಲಿನ್ಯದಿಂದಾಗಿ ಪ್ರತಿ ವರ್ಷ ಜಾಗತಿಕವಾಗಿ 90 ಲಕ್ಷ ಜನರು ಮೃತಪಡುತ್ತಿದ್ದಾರೆ. ಕಾರು, ಟ್ರಕ್‌ ಮತ್ತು ಕೈಗಾರಿಕೆಗಳು ಹೊರಸೂಸುವ ಹೊಗೆಯಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ 2000ನೇ ಇಸವಿಯಿಂದ ಶೇ 55ರಷ್ಟು ಏರಿಕೆಯಾಗಿದೆಎಂದು ಅಧ್ಯಯನವೊಂದು ತಿಳಿಸಿದೆ.

ಲ್ಯಾನ್ಸೆಟ್‌ ಪ್ಲಾನೆಟರಿ ಹೆಲ್ತ್‌ ನಿಯತಕಾಲಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಮತ್ತು ಚೀನಾದಲ್ಲಿ ಮಾಲಿನ್ಯದಿಂದ ಪ್ರತಿ ವರ್ಷ ಕ್ರಮವಾಗಿ 24 ಲಕ್ಷ ಮತ್ತು 22 ಲಕ್ಷ ಜನರು ಮೃತಪಡುತ್ತಿದ್ದಾರೆ ಎಂದು ಅದು ತಿಳಿಸಿದೆ.

ಹಾಗೆಯೇ, ಮಾಲಿನ್ಯದಿಂದ ಅತಿ ಹೆಚ್ಚು ಪ್ರಮಾಣದ ಸಾವು ಸಂಭವಿಸುತ್ತಿರುವ ಹತ್ತು ಪ್ರಮುಖ ರಾಷ್ಟ್ರಗಳ ಪೈಕಿ ಪೂರ್ಣ ಪ್ರಮಾಣದಲ್ಲಿ ಕೈಗಾರೀಕರಣಗೊಂಡಿರುವ ಅಮೆರಿಕ 7ನೇ ಸ್ಥಾನ ಪಡೆದಿದೆ. ಇಲ್ಲಿ 2019ರಲ್ಲಿ ಮಾಲಿನ್ಯದಿಂದಾಗಿ 1,42,883 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ADVERTISEMENT

ಆದರೆ, ಜನಸಂಖ್ಯೆ ಆಧಾರದಲ್ಲಿ ಮಾಲಿನ್ಯದಿಂದ ಉಂಟಾಗುವವಾರ್ಷಿಕ ಸಾವಿನ ದರದಲ್ಲಿ ಅಮೆರಿಕ 31ನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ಲಕ್ಷ ಜನರಲ್ಲಿ 43.6ರಷ್ಟು ಜನರ ಮೃತಪಡುತ್ತಿದ್ದಾರೆ. ಚಾಡ್‌ ಮತ್ತು ಸೆಂಟ್ರಲ್‌ಆಫ್ರಿಕನ್‌ ರಿಪಬ್ಲಿಕ್‌ ದೇಶಗಳು ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಪ್ರತಿ ಲಕ್ಷ ಜನರಲ್ಲಿ 300 ಜನರು ಮಾಲಿನ್ಯದಿಂದ ಸಾಯುತ್ತಿದ್ದಾರೆ ಎಂದು ತಿಳಿಸಿದೆ.

ಕತಾರ್‌ನಲ್ಲಿ ಮಾಲಿನ್ಯದಿಂದ ಸಾವನ್ನಪ್ಪುವರರ ಪ್ರಮಾಣ ಕಡಿಮೆ ಇದೆ. ಇಲ್ಲಿ ಪ್ರತಿ ಲಕ್ಷ ಜನರಿಗೆ 15ರಿಂದ 23 ಜನರು ಮೃತಪಡುತ್ತಾರೆ. ಜಾಗತಿಕವಾಗಿ ಪ್ರತಿ ಲಕ್ಷ ಜನರಲ್ಲಿ ಸರಾಸರಿ 117 ಜನರು ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.