ADVERTISEMENT

ಐಎಸ್‌ಐನ ‘ನೀಲಿ ಕಂಗಳ’ ಹುಡುಗ ಅಜರ್‌

ಪಿಟಿಐ
Published 1 ಮೇ 2019, 20:15 IST
Last Updated 1 ಮೇ 2019, 20:15 IST
   

ವಿಶ್ವಸಂಸ್ಥೆ/ನವದೆಹಲಿ: ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿರುವ ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌, ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐನ ‘ನೀಲಿ ಕಂಗಳ ಹುಡುಗ’. ಭಾರತದ ಸಂಸತ್‌ ಮೇಲೆ 2001ರಲ್ಲಿ ಹಾಗೂ ಪುಲ್ವಾಮಾದಲ್ಲಿ ಇದೇ ಫೆಬ್ರುವರಿಯಲ್ಲಿ ನಡೆದದ್ದು ಸೇರಿದಂತೆ ಅನೇಕ ದಾಳಿಗಳ ಪ್ರಮುಖ ಸಂಚುಕೋರನಾಗಿರುವ ಮಸೂದ್‌ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಗೆ ಕಾರಣನಾಗಿದ್ದ.

ಬಾಂಗ್ಲಾದೇಶದ ಮೂಲಕ ಪೋರ್ಚ್‌ಗೀಸ್‌ ಪಾಸ್‌ಪೋರ್ಟ್‌ನಲ್ಲಿ ಭಾರತ ಪ್ರವೇಶಿಸಿದ್ದ ಅಜರ್‌ನನ್ನು 1994ರ ಫೆಬ್ರುವರಿಯಲ್ಲಿ ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿ ಬಂಧಿಸಲಾಗಿತ್ತು. ಈತನ ಬಿಡುಗಡೆ
ಗಾಗಿಇಂಡಿಯನ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವನ್ನು 1999ರಲ್ಲಿ ಅಜರ್‌ನ ಸಹಚರರು ಅಪಹರಣ ಮಾಡಿದ್ದರು. ನವದೆಹಲಿಯಿಂದ ಕಠ್ಮಂಡುವಿಗೆ ಹೊರಟಿದ್ದ ಈ ವಿಮಾನವನ್ನು ಅಫ್ಗಾನಿಸ್ತಾನದ ಕಂದಹಾರ್‌ಗೆ ಒಯ್ಯಲಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಐಎಸ್‌ಐಗೆ ಅಜರ್‌ ಅತ್ಯಂತ ನಿಕಟವರ್ತಿಯಾಗಿದ್ದ.

ಅಜರ್‌ನನ್ನು ಬಿಡುಗಡೆ ಮಾಡಿದರೆ, ವಿಮಾನದಲ್ಲಿರುವ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗುವುದು ಎಂದು ಈತನ ಸಹಚರರು ಷರತ್ತು ಹಾಕಿ ಬೇಡಿಕೆ ಮಂಡಿಸಿದ್ದರು.ಅಪಹರಣಕಾರರೊಂದಿಗೆ ಮಾತುಕತೆ ವಿಫಲಗೊಂಡ ಬಳಿಕ, ಅಂದಿನ ಎನ್‌ಡಿಎ ಸರ್ಕಾರ ಅಜರ್‌ನನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿತ್ತು. ಅಂದಿನ ವಿದೇಶಾಂಗ ವ್ಯವಹಾರ ಸಚಿವ ಜಸ್ವಂತ್‌ ಸಿಂಗ್‌, ಅಜರ್‌ ಹಾಗೂ ಈತನ ಜೊತೆಗೆ ಬಂಧನಕ್ಕೊಳಗಾಗಿದ್ದ ಇನ್ನಿಬ್ಬರು ಉಗ್ರರನ್ನು 1999ರ ಡಿಸೆಂಬರ್‌ 31 ರಂದು ಕಂದಹಾರಕ್ಕೆ ಕರೆದೊಯ್ದು ಬಿಡುಗಡೆ ಮಾಡಿದ್ದರು.

ADVERTISEMENT

ಇದಕ್ಕೂ ಮುನ್ನ 1999ರಲ್ಲಿ ಅಜರ್‌ನನ್ನು ಇರಿಸಿದ್ದ ಬಾಲ್ವಾಲ್‌ ಜೈಲಿನಲ್ಲಿ ಸುರಂಗ ಮಾರ್ಗ ತೋಡಿ ಪರಾರಿಯಾಗಲು ಯತ್ನ ನಡೆದಿತ್ತು. ಆದರೆ, ಆಜಾನುಬಾಹು ಆಗಿರುವ ಅಜರ್‌ಗೆ ಸುರಂಗ ಮಾರ್ಗದಲ್ಲಿ ಹೋಗಲು ಸಾಧ್ಯವಾಗಲಿಲ್ಲ. ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಬ್ಬ ಉಗ್ರ ಸಜ್ಜದ್‌ ಅಫ್ಗಾನಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಪಾಕಿಸ್ತಾನದ ಭವಲ್‌ಪುರ್‌ನ ಶಾಲೆಯೊಂದರ ನಿವೃತ್ತ ಮುಖ್ಯೋಪಾಧ್ಯಾಯನ ಪುತ್ರ ಅಜರ್‌, ಭಾರತದಲ್ಲಿ ತನ್ನ ಬಂಧನವು ಅಲ್ಪಕಾಲಿಕ ಎಂದೇ ಹೇಳುತ್ತಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.