ADVERTISEMENT

ಚುನಾವಣಾ ಅಖಾಡಕ್ಕೆ ಬ್ರಿಟನ್‌ ಸಜ್ಜು

ಬ್ರೆಕ್ಸಿಟ್‌ ಗೊಂದಲ ಬಗೆಹರಿಸಲು ಹೊಸ ಪ್ರಯತ್ನ; ವಿರೋಧ ಪಕ್ಷದ ಬೆಂಬಲ

ರಾಯಿಟರ್ಸ್
Published 29 ಅಕ್ಟೋಬರ್ 2019, 19:33 IST
Last Updated 29 ಅಕ್ಟೋಬರ್ 2019, 19:33 IST
ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಬೋರಿಸ್‌ ಜಾನ್ಸನ್‌ ---–ಎಎಫ್‌ಪಿ ಚಿತ್ರ
ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಬೋರಿಸ್‌ ಜಾನ್ಸನ್‌ ---–ಎಎಫ್‌ಪಿ ಚಿತ್ರ   

ಲಂಡನ್‌: ಅವಧಿಗೆ ಮುನ್ನ ಚುನಾವಣೆ ನಡೆಸುವ ಪ್ರಸ್ತಾವಕ್ಕೆ ಬ್ರಿಟನ್‌ ಸಂಸದರು ಮಂಗಳವಾರ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಡಿ.12ರಂದು ಚುನಾವಣೆ ನಡೆಸಲು ಅವಕಾಶ ದೊರೆಯಲಿದೆ.

ಸುಮಾರು ಮೂರೂವರೆ ವರ್ಷಗಳಿಂದ ಬ್ರೆಕ್ಸಿಟ್‌ ಒಪ್ಪಂದದ ವಿಳಂಬ ಗತಿಯಿಂದ ಹೊರಬರುವ ಉದ್ದೇಶದಿಂದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಡಿ.12ರಂದು ಮಹಾ ಚುನಾವಣೆ ನಡೆಸುವ ಪ್ರಸ್ತಾವವನ್ನು ಮಂಗಳವಾರ ಮಂಡಿಸಿದ್ದರು.

ಐರೋಪ್ಯ ಒಕ್ಕೂಟ ‘ಬ್ರೆಕ್ಸಿಟ್‌’ ಕುರಿತು ನಿರ್ಧಾರ ತೆಗೆದುಕೊಳ್ಳಲು ಬ್ರಿಟನ್‌ಗೆ ಮತ್ತೆ 3 ತಿಂಗಳ ಕಾಲಾವಕಾಶ ನೀಡಿರುವ ಹಿನ್ನೆಲೆ, ಬೋರಿಸ್‌ ಜಾನ್ಸನ್‌ ಚುನಾವಣೆಯ ಮೂಲಕವೇ ಬ್ರೆಕ್ಸಿಟ್‌ಗೆ ಬೇಕಾದ ಬಹುಮತ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದರು.

ADVERTISEMENT

ಅ.31ರ ಒಳಗೆ ಬ್ರೆಕ್ಸಿಟ್‌ ಗೊಂದಲ ಬಗೆಹರಿಸುವುದಾಗಿ ಜಾನ್ಸನ್‌ ಭರವಸೆ ನೀಡಿದ್ದರು. ಆದರೆ ಗೊಂದಲ ಮುಂದುವರಿದ ಕಾರಣ ಅವಧಿಗೆ ಮುನ್ನವೇ ಚುನಾವಣೆ ನಡೆಸುವ ಪ್ರಸ್ತಾವ ಮಂಡಿಸಿದ್ದರು. ಚುನಾವಣೆ ಹೊರತಾಗಿ ಈ ಸಂಸದೀಯ ಬಿಕ್ಕಟ್ಟು ಬಗೆಹರಿಸುವುದಕ್ಕೆ ಬೇರೆ ದಾರಿ ಕಾಣುತ್ತಿಲ್ಲ. ಆದ್ದರಿಂದ ಚುನಾವಣೆ ಎದುರಿಸುವುದೇ ಉತ್ತಮ ಎಂದು ಸೋಮವಾರ ಜಾನ್ಸನ್‌ ಹೇಳಿದ್ದರು. ಅವರ ಪ್ರಸ್ತಾವವನ್ನು ಸೋಮವಾರ ವಿರೋಧಿಸಿದ್ದ ವಿರೋಧ ಪಕ್ಷ, ಲೇಬರ್‌ ಪಾರ್ಟಿಯ ಜೆರೆಮಿ ಕಾರ್ಬಿನ್‌, ಅವಧಿಗೆ ಮುನ್ನ ಚುನಾವಣೆ ನಡೆಸುವ ಪ್ರಸ್ತಾವವನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದಿದ್ದಾರೆ.

ಬ್ರೆಕ್ಸಿಟ್‌ ಕುರಿತ ನಿರ್ಧಾರಕ್ಕೆ ನೀಡಲಾಗಿದ್ದ ಗಡುವನ್ನು 2020ರ ಜ.31ರವರೆಗೆ ವಿಸ್ತರಿಸಲು ಐರೋಪ್ಯ ಒಕ್ಕೂಟ ಒಪ್ಪಿಗೆ ನೀಡಿದ್ದರಿಂದ ಚುನಾವಣೆ ನಿರ್ಧಾರ ಬೆಂಬಲಿಸಲು ತಮ್ಮ ಪಕ್ಷ ನಿರ್ಧರಿಸಿತು ಎಂದು ತಮ್ಮ ನಿಲುವಿನ ಬದಲಾವಣೆಗೆ ಅವರು ಸಮಜಾಯಿಷಿ ನೀಡಿದ್ದಾರೆ. ಆದರೆ ಬ್ರೆಕ್ಸಿಟ್‌ ಪರ ಇರುವವರು ಮಂಗಳವಾರ ಚುನಾವಣೆ ಪ್ರಸ್ತಾವ ವಿರೋಧಿಸಿಪ್ರತಿಭಟನೆಗಳನ್ನು ನಡೆಸಿದರು. ಅವಧಿಪೂರ್ವ ಚುನಾವಣೆಗೆ ಸರ್ಕಾರ ನಿಗದಿಪಡಿಸಿದ ವೇಳಾಪಟ್ಟಿ ಕುರಿತು ಕಾನೂನು ನಿರೂಪಕರು ಚರ್ಚೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.