ADVERTISEMENT

ಇಸ್ರೇಲ್‌ – ಇರಾನ್‌ ಸಂಘರ್ಷ: ಜಾರ್ಜಿಯಾದಲ್ಲಿ ಸಿಲುಕಿಕೊಂಡ 61 ಮಂದಿ ಭಾರತೀಯರು

ಪಿಟಿಐ
Published 14 ಜೂನ್ 2025, 15:57 IST
Last Updated 14 ಜೂನ್ 2025, 15:57 IST
<div class="paragraphs"><p>ಮೆಟಾ ಎಐ ಚಿತ್ರ</p></div>

ಮೆಟಾ ಎಐ ಚಿತ್ರ

   

ಜೈಸಲ್‌ಮೆರ್/ಜೈಪುರ: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷದಿಂದಾಗಿ ದಿಢೀರನೆ ವಿಮಾನಗಳ ಸಂಚಾರ ಸ್ಥಗಿತಗೊಂಡು ಜಾರ್ಜಿಯಾದಲ್ಲಿ ಸಿಲುಕಿಕೊಂಡಿರುವ ರಾಜಸ್ಥಾನದ 61 ಜನರ ತಂಡವು ತುರ್ತಾಗಿ ಸಹಾಯಕ್ಕೆ ಬರುವಂತೆ ಭಾರತ ಸರ್ಕಾರವನ್ನು ಮನವಿ ಮಾಡಿಕೊಂಡಿದೆ.

29 ಲೆಕ್ಕ ಪರಿಶೋಧಕರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ರಾಜಸ್ಥಾನದ 61 ಮಂದಿ ಜಾರ್ಜಿಯಾ ರಾಜಧಾನಿ ಬ್ಲಿಲಿಸಿಯಲ್ಲಿ ವೃತ್ತಿ ಕೌಶಲ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮವೊಂದಕ್ಕೆ ಜೂನ್‌ 8ರಂದು ತೆರಳಿದ್ದರು. ಜೂನ್‌ 13ರಂದು (ಶುಕ್ರವಾರ) ಅವರು ಶಾರ್ಜಾ ಮೂಲಕ ಭಾರತಕ್ಕೆ ವಾಸಸಾಗಬೇಕಿತ್ತು.

ADVERTISEMENT

ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದ ಜೈಸಲ್ಮೇರ್‌ನ ಭಾವಿಕ್‌ ಭಾಟಿಯಾ ಎಂಬುವರು ತಮ್ಮನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

‘ಜಾರ್ಜಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿಲ್ಲ. ಹೋಟೆಲ್‌ನಲ್ಲಿ ಎಲ್ಲರೂ ಸುರಕ್ಷಿತವಾಗಿದ್ದರೂ ಪರಿಸ್ಥಿತಿಯ ಭಯ ಕಾಡುತ್ತಿದೆ’ ಎಂದು ಭಾಟಿಯಾ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿರುವ ಕುಟುಂಬ ಸದಸ್ಯರೂ ತಮ್ಮವರ ಸುರಕ್ಷಿತ ವಾಪಸಾತಿಗೆ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ‘ಜಾರ್ಜಿಯಾದಲ್ಲಿ ಅಪಾಯದ ಸ್ಥಿತಿ ಇಲ್ಲ. ವಿಮಾನ ಸಂಪರ್ಕದಲ್ಲಿ ವ್ಯತ್ಯಯ ಆಗಿದೆ. ಹೀಗಾಗಿ ವಾಪಸ್ ಪ್ರಯಾಣ ಮಾಡಲು ಆಗುತ್ತಿಲ್ಲ’ ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಐಸಿಎಐ) ಕೇಂದ್ರ ಮಂಡಳಿ ಸದಸ್ಯ ರೋಹಿತ್‌ ರುವಾಟಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.