ADVERTISEMENT

ಎಚ್‌1–ಬಿ ವೀಸಾ ದುರುಪಯೋಗ: 175 ಪ್ರಕರಣಗಳ ತನಿಖೆಗೆ ಟ್ರಂಪ್ ಸರ್ಕಾರದ ಆದೇಶ

ಪಿಟಿಐ
Published 8 ನವೆಂಬರ್ 2025, 15:36 IST
Last Updated 8 ನವೆಂಬರ್ 2025, 15:36 IST
   

ನ್ಯೂಯಾರ್ಕ್‌: ಎಚ್‌1–ಬಿ ವೀಸಾ ದುರುಪಯೋಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನೇತೃತ್ವದ ಸರ್ಕಾರವು ಇಂಥ 175 ಪ್ರಕರಣಗಳ ಕುರಿತು ತನಿಖೆಗೆ ಆದೇಶಿಸಿದೆ.

ಇದರಲ್ಲಿ ಕಡಿಮೆ ವೇತನ, ಹುದ್ದೆಯೇ ಇಲ್ಲದೆ ವೀಸಾ ವಿತರಣೆ ಹಾಗೂ ವೀಸಾ ಹೊಂದಿದ ನೌಕರರಿಗೆ ಕೆಲಸ ನೀಡದೆ ಕೂರಿಸಿ ವೀಸಾ ದುರುಪಯೋಗ ಮಾಡಿಕೊಂಡ ಪ್ರಕರಣಗಳೂ ಸೇರಿವೆ.

‘ಅಮೆರಿಕದವರಿಗೆ ನೌಕರಿ ಮೊದಲು’ ಎಂಬ ಗುರಿಯೊಂದಿಗೆ ದೇಶದಲ್ಲಿರುವ ಉದ್ಯೋಗಾವಕಾಶಗಳನ್ನು ರಕ್ಷಿಸುವುದರ ಭಾಗವಾಗಿ ಈ ತನಿಖೆ ನಡೆಸಲಾಗುತ್ತಿದೆ ಎಂದು ಅಮೆರಿಕದ ಕಾರ್ಮಿಕ ಇಲಾಖೆ ಹೇಳಿದೆ.

ADVERTISEMENT

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಲೊರಿ ಚಾವೆಜ್ ಡೆರಿಮೆರ್ ಅವರು ‘ಎಕ್ಸ್‌’ನಲ್ಲಿ, ‘ಅಮೆರಿನ್ನರ ಉದ್ಯೋಗ ರಕ್ಷಣೆ ಮತ್ತು ಎಚ್-1ಬಿ ವೀಸಾ ದುರುಪಯೋಗ ತಡೆಗೆ ಪ್ರತಿಯೊಂದು ಸಂಪನ್ಮೂಲವನ್ನೂ ಸಮರ್ಥವಾಗಿ ಬಳಸಿಕೊಳ್ಳಲಾಗುವುದು. ಉತ್ಕೃಷ್ಟ ಕೌಶಲದ ಉದ್ಯೋಗಗಳು ಅಮೆರಿಕನ್ನರಿಗೆ ಮೊದಲು ಸಿಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸಲಿದೆ’ ಎಂದಿದ್ದಾರೆ.

ಅಮೆರಿಕದ ಎಚ್-1ಬಿ ವೀಸಾ ಪಡೆದವರಲ್ಲಿ ಭಾರತದ ಐಟಿ ಉದ್ಯೋಗಿಗಳು, ವೈದ್ಯರು ಮುಂಚೂಣಿಯಲ್ಲಿದ್ದಾರೆ. ಆದರೆ ಸದ್ಯ ತನಿಖೆಗೆ ಆದೇಶಿಸಿರುವ 175 ಪ್ರಕರಣಗಳು ಯಾವುವು ಎಂಬ ಮಾಹಿತಿಯನ್ನು ಇಲಾಖೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.