ADVERTISEMENT

ದ್ವೇಷ ಸಾಧನೆಗೆ ನ್ಯಾಯಾಂಗದ ದುರ್ಬಳಕೆ: ಶೇಖ್ ಹಸೀನಾ ಪುತ್ರ ಸಂಜೀಬ್‌ ಆರೋಪ

ಬಾಂಗ್ಲಾ ಮಧ್ಯಂತರ ಸರ್ಕಾರದ ವಿರುದ್ಧ ಹಸೀನಾ ಪುತ್ರ ಆರೋಪ

ಪಿಟಿಐ
Published 25 ಡಿಸೆಂಬರ್ 2024, 12:54 IST
Last Updated 25 ಡಿಸೆಂಬರ್ 2024, 12:54 IST
<div class="paragraphs"><p>ಶೇಖ್‌ ಹಸೀನಾ</p></div>

ಶೇಖ್‌ ಹಸೀನಾ

   

-ಪಿಟಿಐ ಚಿತ್ರ

ವಾಷಿಂಗ್ಟನ್: ‘ಬಾಂಗ್ಲಾದಲ್ಲಿನ ಅವಾಮಿ ಲೀಗ್‌ ನಾಯಕತ್ವದ ವಿರುದ್ಧ ರಾಜಕೀಯ ದ್ವೇಷ ಸಾಧನೆಗಾಗಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ನ್ಯಾಯಾಂಗವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ, ಸಂಜೀಬ್‌ ವಾಜೇದ್ ಆರೋಪಿಸಿದ್ದಾರೆ.

ADVERTISEMENT

‘ಎಕ್ಸ್’ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, ‘ನೇರವಾಗಿ ಚುನಾಯಿತಗೊಳ್ಳದ ಸರ್ಕಾರ ನೇಮಿಸಿರುವ ನ್ಯಾಯಾಧೀಶರು, ಅಧಿಕಾರಿಗಳಿಂದ ವಿಚಾರಣೆ ನಡೆಸುತ್ತಿರುವುದು ರಾಜಕೀಯ ದ್ವೇಷವಲ್ಲದೆ ಮತ್ತೇನೂ ಅಲ್ಲ’ ಎಂದು ಆರೋಪಿಸಿದ್ದಾರೆ.

ಶೇಖ್‌ ಹಸೀನಾ ಮತ್ತು ಅವರ ಸಂಪುಟದಲ್ಲಿ ಸಚಿವರಾಗಿದ್ದವರ ವಿರುದ್ಧ ಬಾಂಗ್ಲಾದೇಶದ ಅಂತರರಾಷ್ಟ್ರೀಯ ನ್ಯಾಯಮಂಡಳಿ (ಐಸಿಟಿ) ಇತ್ತೀಚೆಗೆ ಬಂಧನ ವಾರಂಟ್‌ ಜಾರಿ ಮಾಡಿದೆ. ಮನುಕುಲದ ವಿರುದ್ಧ ಅಪರಾಧ, ನರಮೇಧದ ಆರೋಪ ಹೊರಿಸಲಾಗಿದೆ.

ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡ ಬಳಿಕ 77 ವರ್ಷ ವಯಸ್ಸಿನ ಶೇಖ್‌ ಹಸೀನಾ ಅವರು, ಈ ವರ್ಷದ ಆಗಸ್ಟ್ 5ರಿಂದಲೂ ಭಾರತದ ಆಶ್ರಯ ಪಡೆದಿದ್ದಾರೆ.

ಶೇಖ್‌ ಹಸೀನಾ ಅವರ ಪುತ್ರ ವಾಜೇದ್ ಅವರು ಐ.ಟಿ ಉದ್ಯಮಿ ಆಗಿದ್ದು, ಅಮೆರಿಕದಲ್ಲಿ ನೆಲಸಿದ್ದಾರೆ. ಹಸೀನಾ ಸರ್ಕಾರಕ್ಕೆ ಅವರು ಐಸಿಟಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

ಈ ಮಧ್ಯೆ, ವಿಚಾರಣೆ ನಡೆಸುವ ಉದ್ದೇಶದಿಂದ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಒಪ್ಪಿಸಬೇಕು ಎಂದು ಮಧ್ಯಂತರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿರುವ ತೌಹಿದ್‌ ಹುಸೇನ್ ಅವರು ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.