ADVERTISEMENT

‘ಹೌಡಿ ಮೋದಿ’ಗೆ ಮುನ್ನ ವರುಣನ ಆರ್ಭಟ: ಇಬ್ಬರ ಸಾವು, ತುರ್ತು ಸ್ಥಿತಿ ಘೋಷಣೆ

ಹ್ಯೂಸ್ಟನ್‌ನಲ್ಲಿ ಜನಜೀವನ ಅಸ್ತವ್ಯಸ್ತ

ಪಿಟಿಐ
Published 20 ಸೆಪ್ಟೆಂಬರ್ 2019, 19:40 IST
Last Updated 20 ಸೆಪ್ಟೆಂಬರ್ 2019, 19:40 IST
ಹ್ಯೂಸ್ಟನ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಲಿಟ್ಲ್‌ ಯಾರ್ಕ್ ರಸ್ತೆಯಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು   –ಎಎಫ್‌ಪಿ ಚಿತ್ರ
ಹ್ಯೂಸ್ಟನ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಲಿಟ್ಲ್‌ ಯಾರ್ಕ್ ರಸ್ತೆಯಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು   –ಎಎಫ್‌ಪಿ ಚಿತ್ರ   

ಹ್ಯೂಸ್ಟನ್‌: ಹ್ಯೂಸ್ಟನ್‌ನಲ್ಲಿ ವಿವಿಧೆಡೆ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.

ಮಳೆಯಿಂದಾಗಿ ಜನಜೀವನ ಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಟೆಕ್ಸಾಸ್‌ ರಾಜ್ಯದ ದಕ್ಷಿಣ ಪೂರ್ವದ 13 ಪ್ರಾಂತ್ಯಗಳ ವ್ಯಾಪ್ತಿಯಲ್ಲಿ ರಾಜ್ಯಪಾಲರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜನರಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ.

ಇನ್ನೊಂದೆಡೆ, ಹ್ಯೂಸ್ಟನ್‌ನ ಎನ್ಆರ್‌ಜಿ ಕ್ರೀಡಾಂಗಣದಲ್ಲಿ ಸೆ.22ರ ಭಾನುವಾರ ನಡೆಯಲಿರುವ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿದ್ದು, ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ.

ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 50 ಸಾವಿರಕ್ಕೂ ಅಧಿಕ ಭಾರತೀಯ ಅಮೆರಿಕನ್ನರು ಪಾಲ್ಗೊಳ್ಳುವ ನಿರೀಕ್ಷೆ ಸಂಘಟಕರದು.

ನಿರೀಕ್ಷೆ ಮೀರಿ ಯಶಸ್ಸು: ‘ಹೌಡಿಮೋದಿ’ ಕಾರ್ಯಕ್ರಮದ ಸಂಘಟಕರು ಎಂದಿನಂತೆ ಉತ್ಸಾಹದಲ್ಲಿದ್ದಾರೆ. ಹ್ಯೂಸ್ಟನ್‌ನ ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ ಸಭಿಕರು ಜೀವಮಾನದಲ್ಲಿ ಮೆಲುಕು ಹಾಕುವ ಅನುಭವ ಪಡೆಯುವರು‘ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸಂಘಟಕ ಅಚಲೇಶ್‌ ಅಮರ್, ‘1,500 ಕಾರ್ಯಕರ್ತರು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ. ಭಾನುವಾರ ಅತ್ಯುತ್ತಮ ಕಾರ್ಯಕ್ರಮ ನಡೆಯಲಿದೆ. ಅಮೆರಿಕದಲ್ಲಿನ ಭಾರತೀಯ ಅಮೆರಿಕನ್ನರ ಬೃಹತ್ ಸಮುದಾಯದ ಶಕ್ತಿ ಪ್ರದರ್ಶನವಾಗಲಿದೆ’ ಎಂದು ಆಶಿಸಿದ್ದಾರೆ.

‘ಇದೊಂದು ಕುಟುಂಬ ಕಾರ್ಯಕ್ರಮ. ಇಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಾವು ಬಲಶಾಲಿಗಳು. ಹ್ಯೂಸ್ಟನ್‌ನಲ್ಲಿ ಉತ್ತಮವಾದುದನ್ನು ಸಾಧಿಸಿದ್ದೇವೆ ಎಂದು ನಾವು ಹೇಳಬೇಕಿದೆ. ಮೋದಿ ಅವರು ಈ ಎಲ್ಲವನ್ನು ಗಮನಿಸಬೇಕು ಎಂದು ನಾವು ಬಯಸುತ್ತೇವೆ’ ಎಂದು ಸಂಘಟಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.