ADVERTISEMENT

ಬಾಂಗ್ಲಾದೇಶ | ಇಸ್ಕಾನ್ ನಿಷೇಧಕ್ಕೆ ವಕೀಲರ ಒತ್ತಾಯ; ಹೈಕೋರ್ಟ್ ನಕಾರ

ಪಿಟಿಐ
Published 28 ನವೆಂಬರ್ 2024, 10:02 IST
Last Updated 28 ನವೆಂಬರ್ 2024, 10:02 IST
<div class="paragraphs"><p>ಬಾಂಗ್ಲಾದೇಶದ ಚಿನ್ಮಯ ಕೃಷ್ಣ ದಾಸ್ ಅವರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು</p></div>

ಬಾಂಗ್ಲಾದೇಶದ ಚಿನ್ಮಯ ಕೃಷ್ಣ ದಾಸ್ ಅವರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

   

ಢಾಕಾ: ದೇಶದ್ರೋಹ ಆರೋಪದಡಿ ಹಿಂದೂ ಮುಖಂಡರೊಬ್ಬರ ಬಂಧನದಿಂದ ಉಂಟಾದ ಪೊಲೀಸರು ಹಾಗೂ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದನ್ನು ಪರಿಗಣಿಸಿ ಇಸ್ಕಾನ್ ನಿಷೇಧಿಸಬೇಕು ಎಂಬ ಕೋರಿಕೆಯುಳ್ಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಘಟನೆಯ ನಂತರ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ (ಇಸ್ಕಾನ್‌) ನಿಷೇಧಕ್ಕೆ ವಕೀಲರೊಬ್ಬರು ಆಗ್ರಹಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇತ್ತೀಚಿನ ಬೆಳವಣಿಗೆ ನಂತರ ಇಸ್ಕಾನ್‌ ಕುರಿತು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಟಾರ್ನಿ ಜನರಲ್‌ ಅವರನ್ನು ಕೇಳಿತು.

ADVERTISEMENT

ಬಾಂಗ್ಲಾದೇಶದ ಹಿಂದೂ ಮುಖಂಡ ಚಿನ್ಮಯ ಕೃಷ್ಣ ದಾಸ್‌ ಅವರನ್ನು ಕೆಲ ದಿನಗಳ ಹಿಂದೆ ಇಸ್ಕಾನ್‌ನಿಂದ ಉಚ್ಛಾಟಿಸಲಾಗಿತ್ತು. ನಂತರ ಅವರ ಬಂಧನವಾಯಿತು. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಗಲಭೆ ಆರಂಭವಾಯಿತು. ಇದರಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಫುಲ್ ಇಸ್ಲಾಮ್‌ ಅವರ ಹತ್ಯೆಯಾಯಿತು. 

’ವಕೀಲ ಸೈಫುಲ್ ಅವರ ಕೊಲೆ, ಇಸ್ಕಾನ್‌ನ ಕಾರ್ಯಾಚರಣೆ ಹಾಗೂ 33 ಜನರನ್ನು ಬಂಧಿಸಿರುವುದು ಸೇರಿದಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಅಟಾರ್ನಿ ಜನರಲ್‌ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಬಾಂಗ್ಲಾದೇಶ ನೆಲದ ಕಾನೂನು ಮತ್ತು ಸುವ್ಯವಸ್ಥೆ, ಇಲ್ಲಿನ ನಾಗರಿಕರು, ಆಸ್ತಿಯ ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವ ಭರವಸೆ ಇದೆ’ ಎಂದಿತು.

ದಾಸ್ ಬಂಧನಕ್ಕೆ ಭಾರತ ಕಳವಳ

ದಾಸ್ ಅವರ ಬಂಧನ ಮತ್ತು ಜಾಮೀನು ನಿರಾಕರಣೆ ಕುರಿತು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳ ಸುರಕ್ಷತೆ ಹಾಗೂ ಭದ್ರತೆಗೆ ಅಗತ್ಯ ಕ್ರಮಗಳನ್ನು ಢಾಕಾ ಕೈಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

ಇಸ್ಕಾನ್ ತೀವ್ರವಾದಿ ಸಂಘಟನೆಯಾಗಿದ್ದು, ಅದನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ನ ವಕೀಲರು ಬಾಂಗ್ಲಾದೇಶ ಸರ್ಕಾರಕ್ಕೆ ಬುಧವಾರ ಪತ್ರ ಬರೆದಿದ್ದಾರೆ. 

‘ಬಾಂಗ್ಲಾದೇಶದಲ್ಲಿ ಜನಾಂಗೀಯ ಹಿಂಸಾಚಾರ ಪ್ರಚೋದಿಸುತ್ತಿರುವ ಇಸ್ಕಾನ್ ಸಂಘಟನೆಯನ್ನು ನಿಷೇಧಿಸಬೇಕು. ಇಸ್ಕಾನ್ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಅದರ ಹಿಂದೆ, ದೇಶದಲ್ಲಿ ಹಿಂಸಾಚಾರ ಹರಡುವುದೇ ಅದರ ಉದ್ದೇಶವಾಗಿದೆ. ಹಿಂದೂ ಸಂಪ್ರದಾಯಗಳನ್ನು ಜನರ ಮೇಲೆ ಹೇರುವುದು ಹಾಗೂ ಹಿಂದೂ ಸಮುದಾಯದ ಕೆಳಜಾತಿಗಳ ಜನರನ್ನು ಬಲವಂತದಿಂದ ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಕೆಲಸವನ್ನು ಈ ಸಂಘಟನೆ ಮಾಡುತ್ತಿದೆ’ ಎಂದು ಆರೋಪಿಸಲಾಗಿದೆ.

ಈ ನಡುವೆ ದಾಸ್ ಬಂಧವನ್ನು ಇಸ್ಕಾನ್ ಖಂಡಿಸಿದೆ. ಜತೆಗೆ, ದೇಶದಲ್ಲಿ ಹಿಂದೂಗಳಿಗೂ ಸಹಬಾಳ್ವೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದೆ.

ಬಾಂಗ್ಲಾದೇಶ ಸನಾತನಿ ಜಾಗ್ರಣ ಜೋತೆಯ ವಕ್ತಾರ ದಾಸ್ ಅವರನ್ನು ಢಾಕಾದ ಹಜರತ್‌ ಶಹಾಜಲಾಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿತ್ತು. ಚಿತ್ತೋಗ್ರಾಮದಲ್ಲಿ ಆಯೋಜನೆಗೊಂಡಿದ್ದ ಜಾಥಾದಲ್ಲಿ ದಾಸ್‌ಗೆ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ದಾಸ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ, ಚಟ್ಟೋಗ್ರಾಮದಲ್ಲಿರುವ ಜೈಲಿಗೆ ಕಳುಹಿಸಿತು.

ಇಸ್ಕಾನ್‌ ಮೇಲಿನ ಆರೋಪಗಳೇನು?

‘ಇಸ್ಕಾನ್‌ ಒಂದು ತೀವ್ರಗಾಮಿ ಸಂಘಟನೆಯಾಗಿದ್ದು, ದೇಶದಲ್ಲಿ ಕೋಮು ಸಂಘರ್ಷವನ್ನು ಪ್ರಚೋದಿಸುವ ಚಟುವಟಿಕೆಗಳನ್ನು ರೂಪಿಸುತ್ತದೆ’ ಎಂದು ವಕೀಲ ರಸೂಲ್‌ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಲಾಗಿದೆ. ಬಾಂಗ್ಲಾದೇಶದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯೊಬ್ಬರ ಪುಸ್ತಕದಲ್ಲಿನ ಮಾಹಿತಿಗಳನ್ನು ಹಾಗೂ ಕೆಲವು ಪತ್ರಿಕೆಗಳ ವರದಿಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

  • ಹಿಂದೂ ಪರಂಪರೆಗಳ ಕುರಿತು ತನ್ನ ನಂಬಿಕೆಗಳನ್ನು ಹಿಂದೂ ಸಮುದಾಯದ ಮೇಲೆ ಹೇರುತ್ತದೆ. ಹಿಂದೂ ಧರ್ಮದ ತಳಸಮುದಾಯಗಳ ಜನರನ್ನು ಒತ್ತಾಯಪೂರ್ವಕವಾಗಿ ತನ್ನ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತದೆ 

  • ಭಾರತೀಯ ಮಾಧ್ಯಮಗಳೊಂದಿಗೆ ಸೇರಿ ಜನರ ಮಧ್ಯೆ ಇರುವ ಸೌಹಾರ್ದವನ್ನು ಹಾಳು ಮಾಡಿ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಮಲೇಷ್ಯಾ, ಇಂಡೊನೇಷ್ಯಾ, ಸೌದಿ ಅರೇಬಿಯಾದಲ್ಲಿ ಇಸ್ಕಾನ್‌ಗೆ ನಿಷೇಧ ಇದೆ. ಸೋವಿಯತ್‌ ಒಕ್ಕೂಟ (1970–1980) ನಿಷೇಧ ಹೇರಿತ್ತು. ಇನ್ನಷ್ಟು ದೇಶಗಳಲ್ಲಿ ಇದರ ಕಾರ್ಯಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗುತ್ತಿದೆ

  • ಸನಾತನ ಸಮುದಾಯಕ್ಕೆ ಸೇರಿದ ದೇವಾಲಯಗಳನ್ನು ಕೈವಶ ಮಾಡಿಕೊಳ್ಳುತ್ತದೆ ಮತ್ತು ಆ ದೇವಾಲಯಗಳಲ್ಲಿರುವ ಸನಾತನ ಸಮುದಾಯುದ ಜನರನ್ನು ಓಡಿಸುತ್ತದೆ. ನಂತರ ಮಸೀದಿಗಳ ಮೇಲೆ ದಾಳಿ ನಡೆಸುತ್ತದೆ

  • ತರಾವೀಹ್‌ (ರಂಜಾನ್ ತಿಂಗಳ ರಾತ್ರಿಯ ವಿಶೇಷ ನಮಾಜ್‌) ಸಂದರ್ಭದಲ್ಲಿ ಇಸ್ಕಾನ್‌ ಭಜನೆ ಮಾಡುತ್ತದೆ. ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಪಡಿಸಿದ ಇಂಥ ಘಟನೆಯು ಢಾಕಾದ
    ಸ್ವಾಮಿಭಾಗ್‌ನಲ್ಲಿರುವ ಮಸೀದಿಯಲ್ಲಿ ನಡೆದಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ಪೊಲೀಸರನ್ನು ಕರೆಸಿತ್ತು. ನಂತರ ಇದು ಕೋಮು ಸಂಘರ್ಷಕ್ಕೆ ಕಾರಣವಾಯಿತು 

  • ಸಿಲಹಟ್‌ನಲ್ಲಿದ್ದ ಇಸ್ಕಾನ್‌ ದೇವಸ್ಥಾನದಲ್ಲಿ 2016ರಲ್ಲಿ ಬಂದೂಕುಗಳು ದೊರೆತಿದ್ದವು ಎಂಬ ಆರೋಪವಿದೆ 

ಆರೋಪ ತಳ್ಳಿ ಹಾಕಿದ ಇಸ್ಕಾನ್‌

ತಮ್ಮ ಮೇಲೆ ಮಾಡಿರುವ ಎಲ್ಲ ಆರೋಪಗಳನ್ನು ಬಾಂಗ್ಲಾದೇಶದಲ್ಲಿನ ಇಸ್ಕಾನ್‌ ತಳ್ಳಿ ಹಾಕಿದ್ದು ನಿಷೇಧ ಹೇರುವುದಕ್ಕೆ ನಿರಾಕರಿಸಿದ ಹೈಕೋರ್ಟ್‌ನ ಕ್ರಮವನ್ನು ಸ್ವಾಗತಿಸಿದೆ.

‘ನಮ್ಮದು ಶಾಂತಿಯುತ ಸಂಘಟನೆ. ನಾವು ಮಾನವೀಯತೆಯ ಪ್ರಚಾರಕರು. ಮೂಲಭೂತವಾದಿಗಳು ನಮ್ಮನ್ನು ಗುರಿಯಾಗಿಸುತ್ತಿದ್ದಾರೆ. ದೇಶದಲ್ಲಿ ಕಿರುಕುಳ ಅನುಭವಿಸುತ್ತಿರುವ ಹಿಂದೂ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಬಾಂಗ್ಲಾದೇಶದಲ್ಲಿನ ಇಸ್ಕಾನ್‌ನ ಮುಖ್ಯಸ್ಥ ಚಾರು ಚಂದ್ರದಾಸ್‌ ಬ್ರಹ್ಮಚಾರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಒತ್ತಾಯಪೂರ್ವಕವಾಗಿ ಹಿಂದೂಗಳ ಮತಾಂತರ ಮಾಡುವುದನ್ನು ನಾವು
ತಡೆಯುತ್ತಿದ್ದೇವೆ. ಇದಕ್ಕಾಗಿ ಮೂಲಭೂತವಾದಿಗಳು ನಮ್ಮ ಸಂಘಟನೆಯ ಮಾನ ಹರಾಜು ಹಾಕಲು ಹೊರಟಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಚಾರು ಚಂದ್ರದಾಸ್‌ ಅವರು ಗುರುವಾರ ಪತ್ರಿಕಾಗೋಷ್ಠಿಯನ್ನೂ ನಡೆಸಿದರು. ‘ವಕೀಲ ಇಸ್ಲಾಂ ಅವರ ಹತ್ಯೆ ಪ್ರಕರಣದಲ್ಲಿ ಇಸ್ಕಾನ್‌ ಕೈವಾಡವಿದೆ ಎಂದು ತಪ್ಪಾಗಿ ಬಿಂಬಿಸುವ ಯತ್ನ ನಡೆಯುತ್ತಿದೆ. ಈ ಹತ್ಯೆ ಪ್ರಕರಣದಲ್ಲಿ ನಮ್ಮ ಪಾತ್ರವಿಲ್ಲ. ಜೊತೆಗೆ ಹಿಂದೂಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿಯೂ ನಮ್ಮ ಪಾತ್ರವಿಲ್ಲ. ರಸ್ತೆ ಅಪಘಾತ ನಡೆದರೂ ಅದಕ್ಕೆ ಇಸ್ಕಾನ್‌ ಕಾರಣ ಎನ್ನುವ ಸಂಕಥನವನ್ನು ಸೃಷ್ಟಿಸಲಾಗಿದೆ’ ಎಂದರು. 

‘ಸಂಘಟನೆಯ ಶಿಸ್ತನ್ನು ಉಲ್ಲಂಘಿಸಿದ ಕಾರಣಕ್ಕೆ ದೇಶದ್ರೋಹದ ಆರೋಪದಲ್ಲಿ  ಸದ್ಯ ಬಂಧನದಲ್ಲಿರುವ ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ ಸೇರಿದಂತೆ ಇನ್ನು ಕೆಲವರನ್ನು ಸಂಘಟನೆಯ ಎಲ್ಲ ಹುದ್ದೆಗಳಿಂದ ಸೆಪ್ಟೆಂಬರ್‌ನಲ್ಲಿಯೇ ಕೆಳಗಿಳಿಸಲಾಗಿದೆ. ಜೂನ್‌ನಲ್ಲಿಯೇ ಚಿನ್ಮಯಿ ಅವರ ಕುರಿತು ದೂರುಗಳು ಬಂದಿದ್ದವು. ಚಿನ್ಮಯಿ ಕೃಷ್ಣದಾಸ್‌ ಅವರ ಚಟುವಟಿಕೆಗಳು ನಮ್ಮ ಸಂಘಟನೆಯನ್ನು ಪ್ರತಿನಿಧಿಸುವುದಿಲ್ಲ’ ಎಂದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್‌, ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೊಹಮ್ಮದ್‌ ಯೂನುಸ್‌ ಅವರೊಂದಿಗೆ ಚರ್ಚಿಸಿ, ಚಿನ್ಮಯಿ ದಾಸ್‌ ಬಿಡುಗಡೆಗೆ ಒತ್ತಾಯಿಸಬೇಕು
ಖಂಡೇರಾವ್‌ ಕಂಡ್‌, ಅಧ್ಯಕ್ಷ, ಫೌಂಡೇಷನ್‌ ಫಾರ್‌ ಇಂಡಿಯಾ ಆ್ಯಂಡ್‌ ಇಂಡಿಯನ್‌ ಡೆಸ್ಪೊರಾ ಸ್ಟಡೀಸ್‌ (ಎಫ್‌ಐಐಡಿಎಸ್‌)
ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಚಿವಾಲಯವು ಡಿ.11ಕ್ಕೆ ಮಾಹಿತಿ ನೀಡಲಿದೆ
ಶಶಿ ತರೂರ್‌, ಮುಖ್ಯಸ್ಥ, ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ
ಬಾಂಗ್ಲಾದೇಶವು ಭಾರತಕ್ಕೆ ಸೇರಿಲ್ಲ. ಬೇರೆ ದೇಶದ ಬಗ್ಗೆ ಭಾರತ ಸರ್ಕಾರವು ಗಮನ ಹರಿಸುತ್ತದೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ವಿಚಾರದಲ್ಲಿ ಭಾರತ ಸರ್ಕಾರದ ನೀತಿಗಳನ್ನು ನಾವು ಪಾಲಿಸುತ್ತೇವೆ
ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ, ಪಶ್ಚಿಮ ಬಂಗಾಳ
ಚಿನ್ಮಯಿ ಕೃಷ್ಣದಾಸ್‌ ಅವರನ್ನು ನ್ಯಾಯಯುತ ಮಾರ್ಗದಲ್ಲಿ ಬಂಧಿಸಲಾಗಿಲ್ಲ. ಅವರನ್ನು ಕೂಡಲೇ ಬಿಡುಗಡೆ ಮಾಡಿ. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿ
ಶೇಖ್‌ ಹಸೀನಾ, ಮಾಜಿ ಪ್ರಧಾನಿ (ಅವಾಮಿ ಲೀಗ್‌ ಪಕ್ಷದ ‘ಎಕ್ಸ್‌’ ಖಾತೆಯಿಂದ ಮಾಡಲಾದ ಪೋಸ್ಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.