ADVERTISEMENT

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಹಿಂದೂ ಪತ್ರಕರ್ತನ ಹತ್ಯೆ

ಪಿಟಿಐ
Published 20 ಮಾರ್ಚ್ 2021, 10:28 IST
Last Updated 20 ಮಾರ್ಚ್ 2021, 10:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಪತ್ರಕರ್ತ ಅಜಯ್ ಲಾಲ್‌ವಾನಿ ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಲಾಲ್‌ವಾನಿ ಅವರು ಸ್ಥಳೀಯ ಸುದ್ದಿವಾಹಿನಿಯೊಂದರ ಮತ್ತು ಉರ್ದು ದಿನಪತ್ರಿಕೆಯೊಂದರ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಗುರುವಾರ ಸಿಂಧ್ ಪ್ರಾಂತ್ಯದ ಸುಕ್ಕೂರ್‌ ನಗರದ ಕ್ಷೌರದಂಗಡಿಯಲ್ಲಿ ಕುಳಿತಿದ್ದಾಗ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಅವರ ಕೈಗಳು, ಹೊಟ್ಟೆ ಹಾಗೂ ಮೊಣಕಾಲಿಗೆ ಗಾಯಗಳಾಗಿದ್ದವು ಎಂದು ‘ದಿ ನ್ಯೂಸ್ ಇಂಟರ್‌ನ್ಯಾಷನಲ್’ ವರದಿ ಮಾಡಿದೆ.

ಲಾಲ್‌ವಾನಿ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.

ವೈಯಕ್ತಿಕ ವೈಷಮ್ಯ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ತಮಗೆ ಯಾರ ಜತೆಗೂ ಶತ್ರುತ್ವ ಇಲ್ಲ ಎಂದು ಲಾಲ್‌ವಾನಿ ತಂದೆ ದಿಲೀಪ್ ಕುಮಾರ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಮೂವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.