
ಸಾಂದರ್ಭಿಕ ಚಿತ್ರ
ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಬೆಂಕಿ ಹಚ್ಚಿ ಸಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯ ನರಸಿಂಗ್ಡಿ ನಗರದ ಹೊರವಲಯದಲ್ಲಿ ಈ ಕೃತ್ಯ ಶನಿವಾರ ನಡೆದಿದೆ ಎಂದು ಎಸ್‌ಪಿ ಅಬ್ದುಲ್ಲ ಅಲ್ ಫಾರೂಕ್ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು 25 ವರ್ಷ ವಯಸ್ಸಿನ ಚಂಚಲ್ ಭೂಮಿಕ್ ಎಂದು ಗುರುತಿಸಲಾಗಿದೆ. ಆತ ಸ್ಥಳೀಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಂಚಲ್ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಗ್ಯಾರೇಜ್‌ನಲ್ಲಿಯೇ ಮಲಗಿದ್ದ. ಈ ವೇಳೆ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡದಿಂದಾಗಿ ಆತ ಸತ್ತಿದ್ದಾನೆ ಎಂದು ಅವರು ವಿವರಿಸಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಅನುಮಾನಾಸ್ಪದ ವ್ಯಕ್ತಿಗಳು ಸ್ಥಳದಲ್ಲಿ ಇದ್ದಿದ್ದು ಕಂಡು ಬಂದಿದೆ. ಅದಾಗ್ಯೂ ಈ ಘಟನೆ ಉದ್ದೇಶಪೂರ್ವಕವೋ? ಆಕಸ್ಮಿಕ ಬೆಂಕಿ ಅವಘಡವೋ? ಎಂಬುದು ಸಂಪೂರ್ಣ ತನಿಖೆಯಿಂದ ತಿಳಿದು ಬರಲಿದೆ ಎಂದು ಎಸ್‌ಪಿ ಅಬ್ದುಲ್ ತಿಳಿಸಿದ್ದಾರೆ.
ಕಳೆದ ತಿಂಗಳು ಉದ್ರಿಕ್ತರ ಗುಂಪೊಂದು ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ಬಹಿರಂಗವಾಗಿಯೇ ಬೆಂಕಿ ಹಚ್ಚಿ ಸಾಯಿಸಿದ್ದ ಘಟನೆ ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ತಲ್ಲಣ ಸೃಷ್ಟಿಸಿತ್ತು.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಹಿಂದೂ ಧರ್ಮೀಯರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ, ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿ ಭಾರತದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಎಕ್ಸ್ ಮಾಹಿತಿ ಹಂಚಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.