ಒಟ್ಟಾವ: 1985ರಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಶಂಕಿತನನ್ನು ಕೊಲೆ ಮಾಡಿದ್ದ ಅಪರಾಧಿಯೊಬ್ಬನಿಗೆ ಕೆನಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಟ್ಯಾನರ್ ಫಾಕ್ಸ್ ಶಿಕ್ಷೆಗೆ ಗುರಿಯಾದ ಅಪರಾಧಿ. ರಿಪುದಮನ್ ಸಿಂಗ್ ಮಲಿಕ್ ಎಂಬಾತನನ್ನು ಹತ್ಯೆ ಮಾಡಿದ್ದಾಗಿ ಟ್ಯಾನರ್ ಫಾಕ್ಸ್ ಮತ್ತು ಆತನ ಸಹಚರ ಜೋಸ್ ಲೋಪೆಜ್ ಕಳೆದ ಅಕ್ಟೋಬರ್‌ನಲ್ಲಿ ತಪ್ಪೊಪ್ಪಿಕೊಂಡಿದ್ದರು. ಪಶ್ಚಿಮ ಕೆನಡಾದ ವ್ಯಾಂಕೋವರ್ ಉಪನಗರದಲ್ಲಿ 2022ರ ಜುಲೈನಲ್ಲಿ ಮಲಿಕ್‌ನನ್ನು ಗುಂಡಿಕ್ಕಿ ಕೊಲ್ಲಲು ತಮಗೆ ಹಣ ನೀಡಲಾಗಿತ್ತು ಎಂದು ಹೇಳಿಕೆ ನೀಡಿರುವ ಈ ಇಬ್ಬರು, ಹತ್ಯೆ ನಡೆಸಲು ತಮ್ಮನ್ನು ಯಾರು ನಿಯೋಜಿಸಿದ್ದರು ಎಂಬುದನ್ನು ಬಹಿರಂಗಪಡಿಸಿಲ್ಲ. ಫೆಬ್ರುವರಿ 6ರಂದು ಲೋಪೆಜ್ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾನೆ.
ನಾಲ್ಕು ದಶಕಗಳ ಹಿಂದಿನ, ಅಂದರೆ 1985ರಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಲಿಕ್ ಮತ್ತು ಅಜೈಬ್ ಸಿಂಗ್ ಬಾಗ್ರಿ ಖುಲಾಸೆಗೊಂಡಿದ್ದರು. ಏರ್ ಇಂಡಿಯಾ ವಿಮಾನ–182 ಅನ್ನು ಬಾಂಬ್ ಇರಿಸಿ ಸ್ಫೋಟಿಸಿದ ಪರಿಣಾಮ 329 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಏಕೈಕ ಅಪರಾಧಿ ಇಂದರ್ಜಿತ್ ಸಿಂಗ್ ರೇಯತ್. ಬಾಂಬ್ ತಯಾರಿಸಿದ ಆರೋಪ ಈತನ ವಿರುದ್ಧ ಸಾಬೀತಾಯಿತು. ಆದರೆ, ಬಾಂಬ್ ಇರಿಸಿದ ಆರೋಪದಲ್ಲಿ ಮಲಿಕ್ ಮತ್ತು ಬಾಗ್ರಿ ಖುಲಾಸೆಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.