ADVERTISEMENT

ಹಾಂಗ್‌ಕಾಂಗ್‌: ಅಶ್ರುವಾಯು ಪ್ರಯೋಗಕ್ಕೆ ಖಂಡನೆ

ಹಾಂಗ್‌ಕಾಂಗ್‌ನಲ್ಲಿ ಪೊಲೀಸರ ವಿರುದ್ಧ ಜನರ ಆಕ್ರೋಶ

ಏಜೆನ್ಸೀಸ್
Published 28 ಜುಲೈ 2019, 20:01 IST
Last Updated 28 ಜುಲೈ 2019, 20:01 IST
ಪೊಲೀಸರ ಅಶ್ರುವಾಯು ಪ್ರಯೋಗ ಖಂಡಿಸಿ ಹಾಂಗ್‌ಕಾಂಗ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು –ರಾಯಿಟರ್ಸ್ ಚಿತ್ರ
ಪೊಲೀಸರ ಅಶ್ರುವಾಯು ಪ್ರಯೋಗ ಖಂಡಿಸಿ ಹಾಂಗ್‌ಕಾಂಗ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು –ರಾಯಿಟರ್ಸ್ ಚಿತ್ರ   

ಹಾಂಗ್‌ಕಾಂಗ್‌: ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್‌ ಗುಂಡುಗಳನ್ನು ಭಾನುವಾರವೂ ಪ್ರಯೋಗಿಸಿದ್ದಾರೆ.

ಇಲ್ಲಿನ ಬೀಜಿಂಗ್‌ ಆಡಳಿತ ಕಚೇರಿ ಎದುರು ಶನಿವಾರ ಪೊಲೀಸರು ನಡೆಸಿದ ಅಶ್ರುವಾಯು ಪ್ರಯೋಗ ಖಂಡಿಸಿ ಜಮಾಯಿಸಿದ್ದರು. ಈ ವೇಳೆ 200 ಪ್ರತಿಭಟನಕಾರರು ‘ಲಾಯಾಯ್‌ಸನ್‌’ ಕಚೇರಿ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ರಬ್ಬರ್‌ ಗುಂಡುಗಳ ಮಳೆಗರೆದರು. ಪ್ರತಿಯಾಗಿ ಜನರು ಇಟ್ಟಿಗೆ ಮತ್ತು ಕಲ್ಲುಗಳನ್ನು ತೂರಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು, ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

‘ರಾಪ್ಟರ್‌’ ಭದ್ರತಾ‍ಪಡೆ ಹಲವು ಮಂದಿಯನ್ನು ಬಂಧಿಸಿದೆ. ಗಾಯಗೊಂಡ ಇಬ್ಬರು ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಈ ಮೊದಲು ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದ್ದ ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ಪೊಲೀಸರ ಎಚ್ಚರಿಕೆಯನ್ನು ಉಲ್ಲಂಘಿಸಿದ ಪ್ರತಿಭಟನಕಾರರು ಚೀನಾ ವಿರುದ್ಧ ಘೋಷಣೆ ಕೂಗಿದ್ದಾರೆ.

‘ಪರಿಸ್ಥಿತಿ ಸಂಘರ್ಷಮಯವಾಗಿದೆ. ಹಾಂಗ್‌ಕಾಂಗ್‌ ಯುವಜನತೆ ತಮ್ಮ ಭವಿಷ್ಯಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದಾರೆ’ ಎಂದುಪ್ರತಿಭಟನಾ ನಿರತ ವಿದ್ಯಾರ್ಥಿ ಮಾರ್ಕಸ್‌ ಕಣ್ಣೀರುಗರೆಯುತ್ತ ಹೇಳಿದರು.

*
ಜನರ ಬೇಡಿಕೆಯನ್ನು ಈಡೇರಿಸುವವರೆಗೂ ಪ್ರತಿಭಟನೆ ನಿಲ್ಲದು.‌ ದನಿ ಹತ್ತಿಕ್ಕುವ ಕೆಲಸ ಮಾಡಿದರೆ, ಪರಿಸ್ಥಿತಿ ಮತ್ತಷ್ಟು ವಿಷಮಗೊಳ್ಳಲಿದೆ.
-ಕ್ಲೌಡಿಯಾ ಮೊ, ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.