ADVERTISEMENT

ಟ್ರಂಪ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆ ಆರಂಭಿಸುತ್ತೇವೆ: ನ್ಯಾನ್ಸಿ ಪೆಲೋಸಿ

ಏಜೆನ್ಸೀಸ್
Published 11 ಜನವರಿ 2021, 11:39 IST
Last Updated 11 ಜನವರಿ 2021, 11:39 IST
ಸಂಸತ್ ಸಭೆಯ (ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್) ಸ್ಪೀಕರ್ ನ್ಯಾನ್ಸಿ ಪೆಲೊಸಿ:  ಎಪಿ ಚಿತ್ರ
ಸಂಸತ್ ಸಭೆಯ (ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್) ಸ್ಪೀಕರ್ ನ್ಯಾನ್ಸಿ ಪೆಲೊಸಿ: ಎಪಿ ಚಿತ್ರ   

ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಮೇಲೆ ದಾಳಿಗೆ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಸಂಸತ್ ಸಭೆಯ (ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್) ಸ್ಪೀಕರ್ ನ್ಯಾನ್ಸಿ ಪೆಲೊಸಿ ಹೇಳಿದ್ದಾರೆ.

ಸಂವಿಧಾನದ 25 ನೇ ತಿದ್ದುಪಡಿಯಡಿ ಟ್ರಂಪ್ ಅವರನ್ನು ಅಧಿಕಾರಕ್ಕೆ ಅನರ್ಹರೆಂದು ತೆಗೆದುಹಾಕುವಂತೆ ಸಂಪುಟಕ್ಕೆ ಕರೆ ನೀಡಲು ಸೋಮವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಿರ್ಣಯ ಮಂಡನೆ ಮಾಡಲಾಗುವುದು ಎಂದು ಕಾಂಗ್ರೆಸ್‌ನಅಗ್ರ ಡೆಮಾಕ್ರಟಿಕ್ ನಾಯಕಿ ಪೆಲೋಸಿ ಹೇಳಿದ್ದಾರೆ.

ಒಂದೊಮ್ಮೆ ಈ ಪ್ರಕ್ರಿಯೆಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಒಪ್ಪದಿದ್ದರೆ, ಹೌಸ್‌ ಆಫ್ ರೆಪ್ರೆಸೆಂಟಿಟೀವ್‌ನಲ್ಲಿ "ನಾವು ದೋಷಾರೋಪಣೆ ಶಾಸನದ ಮೂಲಕ ಮುಂದುವರೆಯುತ್ತೇವೆ" ಎಂದು ಪೆಲೋಸಿ ಹೇಳಿದರು.

ADVERTISEMENT

"ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ದೃಷ್ಟಿಯಿಂದ ನಾವು ತುರ್ತು ಕಾರ್ಯಪ್ರೌವೃತ್ತರಾಗುತ್ತೇವೆ, ಏಕೆಂದರೆ, ಈ ಅಧ್ಯಕ್ಷ ಎರಡಕ್ಕೂ ಬೆದರಿಕೆ ಆಗಿದ್ದಾನೆ," ಎಂದು ಅವರು ಹೇಳಿದ್ದಾರೆ.

"ದಿನಗಳು ಉರುಳಿದಂತೆ, ಈ ಅಧ್ಯಕ್ಷರು ನಮ್ಮ ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ದಾಳಿಯ ಭಯಾನಕತೆ ತೀವ್ರಗೊಂಡಿದೆ. ಹಾಗಾಗಿ, ಅವರ ಮೇಲೆ ತಕ್ಷಣದ ಕ್ರಮ ಅಗತ್ಯವಾಗಿದೆ." ಎಂದಿದ್ಧಾರೆ.

2019 ರ ಡಿಸೆಂಬರ್‌ನಲ್ಲಿ ಜೋ ಬಿಡೆನ್‌ ಅವರ ಮೇಲೆ ರಾಜಕೀಯ ದ್ವೇಷಕಾರಲು ಉಕ್ರೇನ್‌ನ ನಾಯಕನ ಮೇಲೆ ಒತ್ತಡ ಹೇರಿದ್ದಕ್ಕಾಗಿ. ಡೆಮಾಕ್ರಟಿಕ್ ಹಿಡಿತವಿರುವ ಸದನದಲ್ಲಿ ಈಗಾಗಲೇ ಒಂದು ಬಾರಿ ಡೊನಾಲ್ಡ್ ಟ್ರಂಪ್‌ಗೆ ದೋಷಾರೋಪಣೆ ಹೊರಿಸಲಾಗಿತ್ತು. ಆದರೆ, ರಿಪಬ್ಲಿಕನ್ಸ್ ಹೆಚ್ಚಿರುವ ಸೆನೆಟ್‌ನಲ್ಲಿ ಖುಲಾಸೆಗೊಂಡಿದ್ದರು.

ಈಗ ಮತ್ತೊಮ್ಮೆ ಟ್ರಂಪ್ ವಿರುದ್ಧ ದೋಷಾರೋಪಣೆಯ ಸಮಯ ಬಂದಿದೆ. ಡೆಮಾಕ್ರಟಿಕ್ ಪಕ್ಷವು ಮತ್ತೆ ಟ್ರಂಪ್ ಅವರ ಮೇಲೆ ದೋಷಾರೋಪಣೆ ಹೊರಿಸಲು ಮುಂದಾಗಿದ್ದು, ಅದಕ್ಕೆ ಸದನದಲ್ಲಿ ಬೇಕಾದಷ್ಟು ಮತಗಳನ್ನು ಹೊಂದಿದ್ದಾರೆ. ಇದಕ್ಕೆ ಕೆಲವು ರಿಪಬ್ಲಿಕನ್ ಬೆಂಬಲವನ್ನು ಸಹ ಪಡೆಯಬಹುದು.

ಆದರೆ, 100 ಸದಸ್ಯರ ಸೆನೆಟ್‌ನಲ್ಲಿ ಟ್ರಂಪ್ ಅವರನ್ನು ಶಿಕ್ಷಿಸಲು ಮತ್ತು ಅವರನ್ನು ಅಧಿಕಾರದಿಂದ ತೆಗೆದುಹಾಕಲು ಬೇಕಾದ ಮೂರನೇ ಎರಡರಷ್ಟು ಬಹುಮತವನ್ನು ಒಟ್ಟುಗೂಡಿಸುವ ಸಾಧ್ಯತೆ ಇಲ್ಲ.

ಟ್ರಂಪ್ ಅವರ ಉತ್ತರಾಧಿಕಾರಿ ನೂತನ ಅಧ್ಯಕ್ಷ ಜೋ ಬಿಡೆನ್ ಜನವರಿ 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.