ಮೊಟ್ಟೆ ಉತ್ಪಾದನಾ ಕೇಂದ್ರ
ರಾಯಿಟರ್ಸ್ ಚಿತ್ರ
ಕೋಪೆನ್‌ಹೇಗನ್: ‘ದೇಶದಲ್ಲಿ ಮೊಟ್ಟೆ ದರ ಗಗನಕ್ಕೇರಿದ್ದು, ನೀವು ಎಷ್ಟು ಮೊಟ್ಟೆಗಳನ್ನು ನಮಗೆ ಕಳುಹಿಸಲು ಸಾಧ್ಯ’ ಎಂದು ಡೆನ್ಮಾರ್ಕ್ ಒಳಗೊಂಡು ಐರೋಪ್ಯ ರಾಷ್ಟ್ರಗಳನ್ನು ಅಮೆರಿಕ ಕೇಳಿದೆ ಎಂದು ನಾರ್ಡಿಕ್ ಮೊಟ್ಟೆ ಸಂಘಟನೆ ಹೇಳಿದೆ.
ಗ್ರೀನ್‌ಲ್ಯಾಂಡ್ ಮೇಲಿನ ನಿಯಂತ್ರಣವನ್ನು ತನಗೆ ನೀಡಬೇಕು ಎಂಬ ಅಮೆರಿಕದ ಬೇಡಿಕೆಯ ಜತೆಗೆ, ಡೆನ್ಮಾರ್ಕ್ ಮೇಲೆ ಸುಂಕ ಹೇರಿಕೆಯನ್ನು ಹೆಚ್ಚಿಸಲಾಗಿದೆ. ಇದೇ ಅವಧಿಯಲ್ಲಿ ಹಕ್ಕಿ ಜ್ವರ ವ್ಯಾಪಿಸಿದ್ದರಿಂದಾಗಿ ಮೊಟ್ಟೆ ಪೂರೈಕೆ ಕುಂಠಿತಗೊಂಡಿದೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ವಾರದಲ್ಲೇ ಮೊಟ್ಟೆ ದರ ಇಳಿಕೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದರು. ಆದರೆ ನಂತರದಲ್ಲಿ ಶೇ 59ರಷ್ಟು ಬೆಲೆ ಏರಿಕೆಯಾಗಿರುವುದು ಅಮೆರಿಕನ್ನರ ನಿದ್ದೆಗೆಡಿಸಿದೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಅಮೆರಿಕದ ಕೃಷಿ ಇಲಾಖೆಯು, ಮೊಟ್ಟೆ ಉತ್ಪಾದಿಸುವ ರಾಷ್ಟ್ರಗಳನ್ನು ಸಂಪರ್ಕಿಸಿ, ಪೂರೈಕೆ ಹೆಚ್ಚಿಸುವ ಬೇಡಿಕೆ ಇಟ್ಟಿದೆ.
‘ವಾಷಿಂಗ್ಟನ್‌ನ ಮಾರ್ಗಸೂಚಿ ಕುರಿತು ಇನ್ನಷ್ಟು ಸ್ಪಷ್ಟತೆಯನ್ನು ಬಯಸುತ್ತಿದ್ದೇವೆ. ಹಾಗೆಂದು ಐರೋಪ್ಯ ರಾಷ್ಟ್ರದಲ್ಲೂ ಮೊಟ್ಟೆಯ ದಾಸ್ತಾನು ಹೆಚ್ಚೇನೂ ಇಲ್ಲ. ಹಕ್ಕಿ ಜ್ವರದಿಂದಾಗಿ ಮೊಟ್ಟೆ ಉತ್ಪಾದನೆ ಕುಂಠಿತಗೊಂಡಿದೆ‘ ಎಂದು ಡ್ಯಾನಿಶ್ ಮೊಟ್ಟೆ ಸಂಘಟನೆ ಹೇಳಿದೆ.
ಟರ್ಕಿಯು ಅಮೆರಿಕಕ್ಕೆ ಸುಮಾರು 15 ಸಾವಿರ ಟನ್ ಮೊಟ್ಟೆಯನ್ನು ರಫ್ತು ಮಾಡಲಾರಂಭಿಸಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.