ADVERTISEMENT

ಮಾನವ ಹಕ್ಕು ಉಲ್ಲಂಘನೆ: ಅಮೆರಿಕ ಹೇಳಿಕೆಗೆ ಭಾರತ ತಿರುಗೇಟು

ಪಿಟಿಐ
Published 14 ಏಪ್ರಿಲ್ 2022, 20:49 IST
Last Updated 14 ಏಪ್ರಿಲ್ 2022, 20:49 IST
ಜೈಶಂಕರ್‌
ಜೈಶಂಕರ್‌   

ವಾಷಿಂಗ್ಟನ್‌:‘ನಮ್ಮ ಕುರಿತು ಅಭಿಪ್ರಾಯಗಳನ್ನು ಹೊಂದಲು ಇತರರಿಗೆ ಹಕ್ಕು ಇದೆ. ಅದೇ ರೀತಿಯಲ್ಲಿ, ಅವರ ಅಭಿಪ್ರಾಯಗಳು, ಹಿತಾಸಕ್ತಿಗಳು, ಲಾಬಿಗಳು ಮತ್ತು ಅದಕ್ಕೆ ಕಾರಣವಾಗಿರುವ ಮತಬ್ಯಾಂಕ್‌ ಬಗ್ಗೆ ಅಭಿಪ್ರಾಯ ಹೊಂದುವ ಹಕ್ಕು ನಮಗೂ ಇದೆ. ಚರ್ಚೆಗಳು ನಡೆದಾಗ, ಈ ಬಗ್ಗೆ ಮಾತನಾಡಲು ನಾವು ಹಿಂಜರಿಯುವುದಿಲ್ಲ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಸರ್ಕಾರದ ಕೆಲವು ಅಧಿಕಾರಿಗಳು, ಪೊಲೀಸರು ಮತ್ತು ಜೈಲು ಅಧಿಕಾರಿಗಳು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳು ಸೇರಿದಂತೆ, ಭಾರತದಲ್ಲಿ ಈಚೆಗೆ ನಡೆಯುತ್ತಿರುವ ‘ಕಳವಳಕಾರಿ ಬೆಳವಣಿಗೆ’ಗಳ ಬಗ್ಗೆ ಅಮೆರಿಕ ನಿಗಾ ಇರಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಹೇಳಿದ್ದರು.ಭಾರತ ಮತ್ತು ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ನಡುವಣ 2+2 ಮಾತುಕತೆಯ ನಂತರದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದರು.

ಇದಕ್ಕೆ ಪ್ರತಿಕ್ರಿಯೆಯ ರೀತಿಯಲ್ಲಿ ಮಾತನಾಡಿದ ಜೈಶಂಕರ್‌, ಮಾನವ ಹಕ್ಕುಗಳ ವಿಷಯವು 2+2 ಮಾತುಕತೆಯ ವಿಷಯ ಆಗಿರಲಿಲ್ಲ ಎಂದು ಗುರುವಾರ ಹೇಳಿದ್ದಾರೆ.

ADVERTISEMENT

‘ಅಮೆರಿಕವೂ ಸೇರಿ ಇತರೆಡೆಯ ಮಾನವ ಹಕ್ಕು ಪರಿಸ್ಥಿತಿಯ ಬಗ್ಗೆ ನಮಗೂ ನಿಲುವುಗಳು ಇವೆ ಎಂದು ಹೇಳಲು ಬಯಸುತ್ತೇನೆ. ಈ ದೇಶದಲ್ಲಿ (ಅಮೆರಿಕ), ಅದರಲ್ಲಿಯೂ ವಿಶೇಷವಾಗಿ ನಮ್ಮ ಸಮುದಾಯಕ್ಕೆ ಸಂಬಂಧಿಸಿ ಮಾನವ ಹಕ್ಕುಗಳ ವಿಚಾರಗಳು ಬಂದಾಗ ಅದನ್ನು ಖಂಡಿತ ಪ್ರಸ್ತಾಪಿಸುತ್ತೇವೆ. ನಿನ್ನೆಯೂ (ಬುಧವಾರ) ಒಂದು ಪ್ರಕರಣ ವರದಿಯಾಗಿದೆ’ ಎಂದು ಜೈಶಂಕರ್‌ ಹೇಳಿದ್ದಾರೆ.

‘2+2 ಮಾತುಕತೆಯು ಮುಖ್ಯವಾಗಿ ರಾಜಕೀಯ ಮತ್ತು ಸೇನಾ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿತ್ತು. ಮಾನವ ಹಕ್ಕುಗಳ ವಿಚಾರವು ಸಭೆಯಲ್ಲಿ ಚರ್ಚೆಯೇ ಆಗಿಲ್ಲ’ ಎಂದು ಜೈಶಂಕರ್‌ ತಿಳಿಸಿದ್ದಾರೆ.ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಜೈಶಂಕರ್‌ ಹೀಗೆ ಹೇಳಿದ್ದಾರೆ.

‘ಈ ಹಿಂದಿನ ಸಭೆಗಳಲ್ಲಿ ಮಾನವ ಹಕ್ಕುಗಳ ವಿಚಾರ ಪ್ರಸ್ತಾಪ ಆಗಿತ್ತು. ಬ್ಲಿಂಕನ್‌ ಅವರು ಭಾರತಕ್ಕೆ ಬಂದಿದ್ದಾಗ ವಿಷಯ ಚರ್ಚೆ ಆಗಿತ್ತು. ಈ ಹಿಂದೆ ನಡೆದ ಮಾಧ್ಯಮಗೋಷ್ಠಿಯನ್ನು ನೆನಪಿಸಿಕೊಂಡರೆ, ಆಗ ಏನು ಚರ್ಚೆ ಆಗಿತ್ತು ಮತ್ತು ನಾನು ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೆ ಎಂಬುದು ತಿಳಿಯುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.