ADVERTISEMENT

ರಷ್ಯಾ ದಾಳಿ ತೀವ್ರ: ಉಕ್ರೇನ್‌ ಆವರಿಸಿದ ಕತ್ತಲು

ಏಜೆನ್ಸೀಸ್
Published 18 ನವೆಂಬರ್ 2022, 20:16 IST
Last Updated 18 ನವೆಂಬರ್ 2022, 20:16 IST

ಕೀವ್‌: ರಷ್ಯಾ ಕ್ಷಿಪಣಿ ಮತ್ತು ಭಾರಿ ಶೆಲ್‌ ದಾಳಿಯಿಂದ ಉಕ್ರೇನ್ ಇಂಧನ ಮೂಲಸೌಕರ್ಯ ಸಂಪೂರ್ಣ ನಿಶ್ಶಬ್ದಗೊಂಡಿದೆ. ಹಲವು ಗಂಟೆಗಳ ಕಾಲ ವಿದ್ಯುತ್‌ ಸಂಪರ್ಕ ಸ್ಥಗಿತವಾಗಲಿದೆ. ಶೇ 40ಕ್ಕೂ ಹೆಚ್ಚು ವಿದ್ಯುತ್‌ ಸರಬರಾಜು ವ್ಯತ್ಯಯಗೊಂಡಿದೆ. ದೇಶದ ಜನತೆ ಚಳಿಗಾಲದಲ್ಲಿ ವಿದ್ಯುತ್‌ ಕೊರತೆಯಿಂದ ನಲುಗುವಂತಾಗಲಿದೆ ಎಂದುಉಕ್ರೇನ್‌ ವಿದ್ಯುತ್ ಗ್ರಿಡ್ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.

ವಿದ್ಯುತ್‌ ಸರಬರಾಜು ನಿಲುಗಡೆ ಹಲವು ಗಂಟೆಗಳ ಕಾಲ ಮುಂದುವರಿಯಲಿದ್ದು, ಕೊರೆಯುವ ತಾಪಮಾನವು ಇಂಧನ ಜಾಲಗಳ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಲಿದೆ ಎಂದು ಗ್ರಿಡ್ ಆಪರೇಟರ್ ಉಕ್ರೇನರ್ಗೊ ಹೇಳಿದೆ.

ಕಳೆದ 24 ಗಂಟೆಗಳಲ್ಲಿ, ರಷ್ಯಾ ಪಡೆಗಳು ಉಕ್ರೇನ್‌ನ ಆಗ್ನೇಯ ಭಾಗದಲ್ಲಿ ಡ್ರೋನ್, ಕ್ಷಿಪಣಿ, ಶೆಲ್‌ ಹಾಗೂ ವೈಮಾನಿಕ ದಾಳಿ ನಡೆಸಿದ್ದು, ಆರು ನಾಗರಿಕರು ಮೃತಪಟ್ಟಿದ್ದಾರೆ. ಹಲವು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷರ ಕಚೇರಿ ತಿಳಿಸಿದೆ.

ADVERTISEMENT

ರಷ್ಯಾದಿಂದ ಸುಮಾರು 40 ಕ್ಷಿಪಣಿಗಳು ನಿಕೊಪೋಲ್‌ ನಗರಕ್ಕೆ ಅಪ್ಪಳಿಸಿ, ಹಲವು ಗಗನಚುಂಬಿ ಕಟ್ಟಡಗಳು, ವಸತಿಗಳು ಹಾಗೂ ವಿದ್ಯುತ್‌ ಮಾರ್ಗಗಳು ಹಾನಿಗೀಡಾಗಿವೆ.

ವಿಲ್‌ನಿಯನ್‌ಸ್ಕ್‌ ನಗರದ ವಸತಿ ಕಟ್ಟಡದ ಮೇಲೆಗುರುವಾರ ನಡೆದ ಕ್ಷಿಪಣಿ ದಾಳಿಯಿಂದ ನಾಗರಿಕರ ಸಾವಿನ ಸಂಖ್ಯೆ ಒಂಬತ್ತಕ್ಕೇರಿದೆ.

ಮಾನವ ಹಕ್ಕುಗಳ ಹೋರಾಟಗಾರರಿಗೆ ಪ್ರಶಸ್ತಿ ಅರ್ಪಿಸಿದ ಮುರ್ಜಾ
ಜಿನೀವಾ:
ಬಂಧನದಲ್ಲಿರುವ ರಷ್ಯಾ ವಿರೋಧಿ ಹೋರಾಟಗಾರ ವ್ಲಾಡಿಮಿರ್‌ ಕಾರಾ ಮುರ್ಜಾ ಅವರಿಗೆ ಒಲಿದ ಹ್ಯೂಮನ್‌ ರೈಟ್ಸ್‌ ಪ್ರಶಸ್ತಿಯನ್ನುಪುಟಿನ್‌ ನಡೆಸುತ್ತಿರುವ ಉಕ್ರೇನ್‌ ಮೇಲಿನ ಯುದ್ಧ ವಿರೋಧಿಸಿ ಪ್ರತಿಭಟಿಸಿ ಬಂಧನಕ್ಕೆ ಒಳಗಾದ ಹೋರಾಟಗಾರರಿಗೆ ಅರ್ಪಿಸಿದ್ದಾರೆ.

ಮುರ್ಜಾ ಅವರ ಪತ್ನಿ ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.ಕಾರಾ-ಮುರ್ಜಾ ಅವರಿಗೆ ಕೌನ್ಸಿಲ್ ಆಫ್ ಯುರೋಪ್‌ನ ವಾಕ್ಲಾವ್ ಹ್ಯಾವೆಲ್ ಮಾನವ ಹಕ್ಕುಗಳ ಪ್ರಶಸ್ತಿಯೂ ಸಿಕ್ಕಿದೆ.

ಪುಟಿನ್‌ ಆಡಳಿತ ಕಚೇರಿ ಕ್ರೆಮ್ಲಿನ್‌ನ ನೀತಿಗಳನ್ನು ಟೀಕಿಸಿ ಭಾಷಣ ಮಾಡಿದ್ದಕ್ಕೆ ಮುರ್ಜಾ ಅವರ ಮೇಲೆ ದೇಶ ದ್ರೋಹ ಆರೋಪ ಹೊರಿಸಲಾಗಿದೆ. ಕಳೆದ ತಿಂಗಳು ಮಾಸ್ಕೊ ನ್ಯಾಯಾಲಯವು ಮುರ್ಜಾ ಅವರಿಗೆ ಡಿಸೆಂಬರ್ 12ರವರೆಗೆ ಬಂಧನ ಅವಧಿ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.