ADVERTISEMENT

ಇಮ್ರಾನ್‌ ಪದಗ್ರಹಣ: ವಿದೇಶಿ ನಾಯಕರಿಗೆ ಆಹ್ವಾನವಿಲ್ಲ, ಆಪ್ತರಿಗಷ್ಟೇ ಆಮಂತ್ರಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 11:15 IST
Last Updated 2 ಆಗಸ್ಟ್ 2018, 11:15 IST
   

ಇಸ್ಲಾಮಾಬಾದ್‌: ಇಮ್ರಾನ್‌ ಖಾನ್‌ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ಅವರ ಆಪ್ತ ಗೆಳೆಯರನ್ನು ಹೊರತುಪಡಿಸಿ ಯಾವುದೇ ವಿದೇಶಿ ನಾಯಕರನ್ನು ಆಹ್ವಾನಿಸುತ್ತಿಲ್ಲ ಎಂದು ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್‌ (ಪಿಟಿಐ) ಪಕ್ಷದ ವಕ್ತಾರ ಫಾವಾದ್‌ ಚೌದರಿ ಗುರುವಾರ ತಿಳಿಸಿದ್ದಾರೆ.

ಇಲ್ಲಿನ ಅಧ್ಯಕ್ಷರ ಭವನದಲ್ಲಿ ಆಗಸ್ಟ್ 11ರಂದು ಇಮ್ರಾನ್‌ ಖಾನ್‌ ಸರಳವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿದೇಶಿ ನಾಯಕರನ್ನು ಆಹ್ವಾನಿಸದಿರುವ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ. ಇದು ರಾಷ್ಟ್ರೀಯ ಕಾರ್ಯಕ್ರಮ ಆಗಿರುವುದರಿಂದ ಅವರ ಆಪ್ತ ಗೆಳೆಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದುಫಾವಾದ್‌ ಚೌದರಿ ತಿಳಿಸಿದ್ದಾರೆ.

ADVERTISEMENT

ಮಾಜಿ ಕ್ರಿಕೆಟಿಗರಾದ ಸುನೀಲ್‌ ಗವಾಸ್ಕರ್‌, ಕಪಿಲ್ ದೇವ್‌, ನವಜೋತ್ ಸಿಂಗ್ ಸಿಧು ಹಾಗೂ ಬಾಲಿವುಡ್ ನಟ ಅಮೀರ್ ಖಾನ್‌ ಅವರಿಗೆ ಇಮ್ರಾನ್‌ ಆಹ್ವಾನ ನೀಡಿದ್ದಾರೆ.

ಇಮ್ರಾನ್ ಖಾನ್‌ ಆಹ್ವಾನವನ್ನು ಸ್ವೀಕರಿಸಿರುವುದಾಗಿ ಸಿಧು ಹೇಳಿದ್ದಾರೆ. ಕ್ರೀಡಾಪಟುಗಳಿಗೆ ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯವಿದೆ, ಇದು ನನಗೆ ಸಂದ ದೊಡ್ಡ ಗೌರವ ಎಂದು ಅವರು ಹೇಳಿದ್ದಾರೆ.

ಇಮ್ರಾನ್ ಖಾನ್ ತಮ್ಮ ಗೆಲುವಿನ ಭಾಷಣದಲ್ಲಿ ಭಾರತದ ಜತೆಗಿನ ಭಾಂದವ್ಯವನ್ನು ಮತ್ತಷ್ಟು ಸುಧಾರಣೆ ಮಾಡುವುದಾಗಿ ಹೇಳಿದ್ದರು.

ಇಮ್ರಾನ್‌ ಖಾನ್‌ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು. ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಪಿಟಿಐ ಪಕ್ಷ ಯಾವುದೇ ವಿದೇಶಿ ನಾಯಕರನ್ನು ಆಹ್ವಾನಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.