ADVERTISEMENT

ಪಾಕಿಸ್ತಾನ ಸರ್ಕಾರ ರಚನೆ: ಮುಂದುವರಿದ ಅನಿಶ್ಚಿತತೆ

ಪಿಟಿಐ
Published 13 ಫೆಬ್ರುವರಿ 2024, 15:37 IST
Last Updated 13 ಫೆಬ್ರುವರಿ 2024, 15:37 IST
<div class="paragraphs"><p>ಪಾಕಿಸ್ತಾನ ಧ್ವಜ</p></div>

ಪಾಕಿಸ್ತಾನ ಧ್ವಜ

   

ರಾಯಿಟರ್ಸ್‌ ಚಿತ್ರ

ಇಸ್ಲಾಮಾಬಾದ್ : ಅತಂತ್ರ ಸಂಸತ್ತು ರಚನೆಯಾಗಿರುವ ಪಾಕಿಸ್ತಾನದಲ್ಲಿ ಸರ್ಕಾರ ರಚನೆ ಕುರಿತ ಅನಿಶ್ಚಿತತೆಯು ಮುಂದುವರಿದಿದೆ.

ADVERTISEMENT

ಪ್ರಮುಖ ಪಕ್ಷಗಳ ಜೊತೆಗೂಡಿ ಮೈತ್ರಿ ಸರ್ಕಾರವನ್ನು ರಚಿಸುವುದನ್ನು ಮಾಜಿ ಪ್ರಧಾನಿ, ಪಿಟಿಐ ಅಧ್ಯಕ್ಷ ಇಮ್ರಾನ್‌ ಖಾನ್‌ ತಳ್ಳಿಹಾಕಿದ್ದಾರೆ. ಸರ್ಕಾರ ರಚನೆ ಕುರಿತ ಚರ್ಚೆಗೆ ಪ್ರಾಂತ್ಯವಾರು ವಿಶೇಷ ಸಮಿತಿಗಳನ್ನು ಅವರು ರಚಿಸಿದ್ದಾರೆ.

ರಾವಲ್ಪಿಂಡಿ ಅಡಿಯಾಲ ಜೈಲಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ರಚನೆಗೆ ‘ಪಿಎಂಎಲ್‌–ಎನ್, ಪಿಪಿಪಿ, ಎಂಕ್ಯೂಎಂ ಜೊತೆ ಚರ್ಚೆ ಇಲ್ಲ. ಇತರೆ ಪಕ್ಷಗಳು, ಆಸಕ್ತರ ಜೊತೆಗೆ ಚರ್ಚೆಗೆ ಸಿದ್ಧ’ ಎಂದು ಹೇಳಿದರು.

ಪಾಕಿಸ್ತಾನ್ ಪೀಪಲ್ಸ್‌ ಪಾರ್ಟಿ ಅಧ್ಯಕ್ಷ ಬಿಲಾವಲ್‌ ಭುಟ್ಟೊ ಜರ್ಧಾರಿ ಅವರು ಪ್ರಧಾನಿ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸರ್ಕಾರದಲ್ಲಿ ಭಾಗಿಯಾಗದೇ ಪಿಎಂಎಲ್–ನವಾಜ್‌ ಪಕ್ಷ ಬೆಂಬಲಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಮೊದಲು ಸರ್ಕಾರದ ಭಾಗವಾಗಬೇಕೇ ಅಥವಾ ಪ್ರತಿಪಕ್ಷದ ಸಾಲಿನಲ್ಲಿ ಕೂರಬೇಕೇ ಎಂಬ ಕುರಿತಂತೆ ಬಿಲಾವಲ್‌ ಭುಟ್ಟೊ ನೇತೃತ್ವದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ)ಯಲ್ಲಿ ಗೊಂದಲ ಮೂಡಿತ್ತು. ಪಕ್ಷದ ಕೇಂದ್ರ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಈ ಕುರಿತಂತೆ ಸ್ಪಷ್ಟ ತೀರ್ಮಾನಕ್ಕೆ ಬರಲಾಗಲಿಲ್ಲ.

ಮತ್ತೊಂದು ಬೆಳವಣಿಗೆಯಲ್ಲಿ ಪಿಎಂಎಲ್‌–ನವಾಜ್‌ ಪಕ್ಷದ ಮುಖ್ಯಸ್ಥ ನವಾಜ್‌ ಷರೀಫ್ ಅವರು 4ನೇ ಬಾರಿಗೆ ಪ್ರಧಾನಿ ಸ್ಥಾನಕ್ಕೇರುವುದು ನಿಶ್ಚಿತ ಎಂದು ಅವರ ಸಹೋದರ, ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಪಾದಿಸಿದ್ದಾರೆ. 

ಅರ್ಜಿಗಳ ವಜಾ: ಈ ಮಧ್ಯೆ, ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಸಲ್ಲಿಸಿದ್ದ 30ಕ್ಕೂ ಹೆಚ್ಚು ತಕರಾರು ಅರ್ಜಿಗಳನ್ನು ಲಾಹೋರ್‌ ಹೈಕೋರ್ಟ್‌ ವಜಾ ಮಾಡಿದೆ.

ಈ ಅರ್ಜಿಗಳನ್ನು ಇಮ್ರಾನ್‌ ಖಾನ್‌ ಅವರ ಪಕ್ಷ ಪಿಟಿಐ ಬೆಂಬಲಿತ ಅಭ್ಯರ್ಥಿಗಳು ಸಲ್ಲಿಸಿದ್ದರು. ಮಾಜಿ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಪುತ್ರಿ ಮರಯಂ ನವಾಜ್‌ ಸೇರಿದಂತೆ ಹಲವು ನಾಯಕರ ಗೆಲುವನ್ನು ಪ್ರಶ್ನಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.