ADVERTISEMENT

ಪಾಕಿಸ್ತಾನದಲ್ಲಿ ಉಗ್ರರ 40 ಸಂಘಟನೆಗಳು ಸಕ್ರಿಯ: ಪ್ರಧಾನಿ ಇಮ್ರಾನ್‌ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 1:55 IST
Last Updated 25 ಜುಲೈ 2019, 1:55 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ವಾಷಿಂಗ್ಟನ್‌ (ಪಿಟಿಐ): ‘ತರಬೇತಿ ನಂತರ ಕಾಶ್ಮೀರ ಅಥವಾ ಅಫ್ಗಾನಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ 30 –40 ಸಾವಿರಕ್ಕೂ ಅಧಿಕ ಉಗ್ರರು ಈಗಲೂ ಪಾಕಿಸ್ತಾನದಲ್ಲಿ ಇದ್ದಾರೆ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಒಪ್ಪಿಕೊಂಡಿದ್ದಾರೆ.

ಇಲ್ಲಿನ ಯುಎಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಪೀಸ್‌ ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಈ ಉಗ್ರ ಸಂಘಟನೆಗಳು ಕಳೆದ 15 ವರ್ಷಗಳಿಂದ ಸಕ್ರಿಯವಾಗಿರುವ ಸತ್ಯವನ್ನು ಈ ಹಿಂದಿನ ಸರ್ಕಾರಗಳು ಅಮೆರಿಕಕ್ಕೆ ಹೇಳಲೇ ಇಲ್ಲ’ ಎಂದು ಟೀಕಿಸಿದರು.

‘ಉಗ್ರ ಸಂಘಟನೆಗಳಿಂದಾಗಿ ಈ ಹಿಂದಿನ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಹ ವಾತಾವರಣ ಇರಲಿಲ್ಲ. ಇಂಥ ಸಂಘಟನೆಗಳ ನಡುವೆ ನಮಗೆ ಬದುಕಲು ಸಾಧ್ಯವೇ ಎಂಬ ಚಿಂತೆ ನನ್ನಂಥ ಅನೇಕರನ್ನು ಆ ದಿನಗಳಲ್ಲಿ ಕಾಡಿದ್ದು ನಿಜ. ಉಗ್ರರ ವಿರುದ್ಧದ ಹೋರಾಟದಲ್ಲಿ ತನಗೆ ಸಹಾಯ ಮಾಡಬೇಕು ಎಂದು ಅಮೆರಿಕ ಬಯಸುತ್ತಿತ್ತು. ಆದರೆ, ಆ ದಿನಗಳಲ್ಲಿ ತನ್ನ ಅಸ್ತಿತ್ವಕ್ಕಾಗಿಯೇ ಪಾಕಿಸ್ತಾನ ಹೋರಾಡುತ್ತಿತ್ತು’ ಎಂದು ವಿವರಿಸಿದರು.

ADVERTISEMENT

‘ಉಗ್ರರನ್ನು ಮಟ್ಟ ಹಾಕಲು ಈ ಹಿಂದಿನ ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ’ ಎಂದು ಹೇಳಿದರು.

‘ಉಗ್ರರು ನಡೆಸುತ್ತಿದ್ದ ಸಂಸ್ಥೆಗಳನ್ನು, ಧಾರ್ಮಿಕ ಶಿಕ್ಷಣ ಕೇಂದ್ರಗಳನ್ನು ವಶಕ್ಕೆ ಪಡೆದಿದ್ದು, ಅವುಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉಗ್ರರು ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಸಹ ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.