ADVERTISEMENT

ಅಫ್ಗಾನಿಸ್ತಾನ: ಸ್ವದೇಶಕ್ಕೆ ಭಾರತೀಯರು ವಾಪಸ್

ವಿಶೇಷ ವಿಮಾನದ ಮೂಲಕ ನಾಗರಿಕರು, ಅಧಿಕಾರಿಗಳನ್ನು ಕರೆಸಿಕೊಂಡ ಭಾರತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 12:38 IST
Last Updated 11 ಆಗಸ್ಟ್ 2021, 12:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ನವದೆಹಲಿ: ತಾಲಿಬಾನ್‌ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ದಾಳಿಯ ಕಾರಣ ಅಫ್ಗಾನಿಸ್ತಾನದ ಉತ್ತರ ಭಾಗದಲ್ಲಿರುವ ಮಜರ್–ಇ–ಷರೀಫ್‌ ನಗರ ಮತ್ತು ಸುತ್ತಮುತ್ತಲು ವಾಸವಿದ್ದ ಸುಮಾರು 50 ಅಧಿಕಾರಿಗಳು ಹಾಗೂ ನಾಗರಿಕರನ್ನು ವಿಶೇಷ ವಿಮಾನದ ಮೂಲಕ ಬುಧವಾರ ಭಾರತವು ವಾಪಸ್ ಕರೆಸಿಕೊಂಡಿದೆ.

ಬುಧವಾರ ಮುಂಜಾನೆ ವಿಶೇಷ ವಿಮಾನವು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಮಜರ್–ಇ–ಷರೀಫ್‌ ನಗರದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ರಾಜತಾಂತ್ರಿಕ ಸಿಬ್ಬಂದಿ ಮತ್ತು ಭಾರತೀಯ ನಾಗರಿಕರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಿಶೇಷ ವಿಮಾನವು ಮಂಗಳವಾರ ತಡರಾತ್ರಿಯೇ ಹೊರಡಬೇಕಾಗಿತ್ತು. ಆದರೆ, ಭದ್ರತೆಯ ಕಾರಣಕ್ಕಾಗಿ ಕೆಲ ತಾಸುಗಳ ವಿಳಂಬದ ನಂತರ ಪ್ರಯಾಣ ಬೆಳೆಸಿತು. ಈ ನಿಟ್ಟಿನಲ್ಲಿ ಭಾರತವು ಅಫ್ಗನ್ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿತ್ತು.

ಈ ನಡುವೆ ಮಜರ್–ಇ–ಷರೀಫ್‌ ನಗರದಲ್ಲಿರುವ ಭಾರತೀಯ ದೂತಾವಾಸ ಕಚೇರಿಯನ್ನು ಮುಚ್ಚುವುದಿಲ್ಲ ಎಂದು ಭಾರತ ಸರ್ಕಾರವು ಸ್ಪಷ್ಟಪಡಿಸಿದ್ದು, ಸ್ಥಳೀಯ ಉದ್ಯೋಗಿಗಳೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದೆ.

ADVERTISEMENT

ಭಾರತ ಮಾತ್ರವಲ್ಲ, ವಿಶ್ವಸಂಸ್ಥೆಯು ತನ್ನ ಅಧಿಕಾರಿಗಳನ್ನು ಮಜರ್-ಇ-ಷರೀಫ್‌ನಿಂದ ಸ್ಥಳಾಂತರಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.