ADVERTISEMENT

ಪಾಕ್‌: ಸಿಖ್‌ ಯುವಕನ ಕೊಲೆ

ಭಾರತ ತೀವ್ರ ಖಂಡನೆ

ಪಿಟಿಐ
Published 5 ಜನವರಿ 2020, 17:14 IST
Last Updated 5 ಜನವರಿ 2020, 17:14 IST
ಗುರುದ್ವಾರದ ಮೇಲಿನ ದಾಳಿ ಖಂಡಿಸಿ ಭಾನುವಾರ ಹೈದರಾಬಾದ್‌ನಲ್ಲಿ ಸಿಖ್‌ ಸಮುದಾಯದವರು ಪ್ರತಿಭಟನೆ ನಡೆಸಿದರು.
ಗುರುದ್ವಾರದ ಮೇಲಿನ ದಾಳಿ ಖಂಡಿಸಿ ಭಾನುವಾರ ಹೈದರಾಬಾದ್‌ನಲ್ಲಿ ಸಿಖ್‌ ಸಮುದಾಯದವರು ಪ್ರತಿಭಟನೆ ನಡೆಸಿದರು.   

ನವದೆಹಲಿ: ಲಾಹೋರ್ ಸಮೀಪ ಗುರುದ್ವಾರದ ಮೇಲೆ ಮುಸಲ್ಮಾನರ ಗುಂಪು ದಾಳಿ ಮಾಡಿದ ಘಟನೆ ಮಾಸುವ ಮೊದಲೇ, ಪೆಶಾವರದಲ್ಲಿ ಅಲ್ಪಸಂಖ್ಯಾತ ಸಿಖ್‌ ಸಮುದಾಯದ ಯುವಕನೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಪೆಶಾವರದ ಚಮ್ಕಾನಿ ಠಾಣೆಯ ವ್ಯಾಪ್ತಿಯಲ್ಲಿ ಗುಂಡೇಟು ಬಿದ್ದಿದ್ದ ಯುವಕನ ಶವ ಪತ್ತೆಯಾಗಿದ್ದು, ಮೃತನನ್ನು ರವೀಂದರ್‌ ಸಿಂಗ್‌ (25) ಎಂದು ಗುರುತಿಸಲಾಗಿದೆ. ಈತ,ಪಾಕಿಸ್ತಾನದಲ್ಲಿ ಟಿ.ವಿ ವಾಹಿನಿಯ ಪ್ರಥಮ ಸಿಖ್‌ ಪತ್ರಕರ್ತ ಹರ್‌ಮೀತ್‌ ಸಿಂಗ್‌ ಅವರ ಸಹೋದರ.

ಮೂಲತಃ ಖೈಬರ್‌–ಪಕ್ತುಂಕ್ವಾ ಪ್ರಾಂತ್ಯದ ಶಾಂಗ್ಲಾ ಜಿಲ್ಲೆಯ ನಿವಾಸಿಯಾಗಿದ್ದು, ವಿವಾಹ ಸಮಾರಂಭಕ್ಕಾಗಿ ಶಾಂಪಿಂಗ್ ಮಾಡಲು ಪೆಶಾವರಕ್ಕೆ ತೆರಳಿದ್ದರು. ಸಹೋದರನ ಫೋನ್‌ನಿಂದ ಕರೆ ಮಾಡಿದ ಅಪರಿಚಿತರು ಕೃತ್ಯದ ಬಗ್ಗೆ ಮಾಹಿತಿ ನೀಡಿದರು ಎಂದು ಹರ್‌ಮೀತ್‌ ಸಿಂಗ್ ತಿಳಿಸಿದರು.

ADVERTISEMENT

ಖಂಡನೆ (ಪಿಟಿಐ ವರದಿ): ಘಟನೆ ಖಂಡಿಸಿರುವ ಸಿಖ್‌ ಸಮುದಾಯದವರನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ನೆಪ ಹೇಳದೆ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಕಳೆದ ಆಗಸ್ಟ್‌ನಲ್ಲಿ ಜಗಜಿತ್‌ ಕೌರ್‌ ಹೆಸರಿನ ಸಿಖ್‌ ಸಮುದಾಯದ ಬಾಲಕಿಯನ್ನು ಅಪಹರಿಸಿ, ಬಲವಂತ ವಾಗಿ ಮತಾಂತರ ಮಾಡಲಾಗಿತ್ತು.

ಇಮ್ರಾನ್‌ ಖಂಡನೆ (ಇಸ್ಲಾಮಾಬಾದ್‌ ವರದಿ): ಗುರುದ್ವಾರದ ಮೇಲೆ ನಡೆದ ದಾಳಿಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಖಂಡಿಸಿದ್ದಾರೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಸುವ ದಾಳಿಯನ್ನು ಸರ್ಕಾರ ಸಹಿಸುವುದಿಲ್ಲ ಎಂದಿದ್ದಾರೆ.

ಗುರುದ್ವಾರದ ಮೇಲೆ ದಾಳಿ: ತನಿಖೆಗೆ ಆಗ್ರಹ

ಶ್ರೀನಗರ:ಲಾಹೋರ್‌ನ ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ನಡೆದಿರುವ ದಾಳಿ ಕುರಿತು ಆದಷ್ಟು ಬೇಗ ತನಿಖೆ ನಡೆಸಬೇಕು ಎಂದುಸಿಖ್ ಸಮುದಾಯ ಆಗ್ರಹಿಸಿದೆ.

ತನಿಖೆ ನಡೆಸಿ, ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಎಂದು ಸರ್ವಪಕ್ಷಗಳ ಸಿಖ್ ಸಹಕಾರ ಸಮಿತಿ(ಎಪಿಎಸ್‌ಸಿಸಿ) ಅಧ್ಯಕ್ಷ ಜಗಮೋಹನ್ ಸಿಂಗ್ ರೈನಾ ಒತ್ತಾಯಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕರ್ತಾರ್‌ಪುರ ಕಾರಿಡಾರ್‌ ತೆರೆಯಬಾರದು ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.