ADVERTISEMENT

ಮ್ಯಾನ್ಮಾರ್‌ ಬೆಳವಣಿಗೆಯನ್ನು ವಿಶ್ವಸಂಸ್ಥೆಯಲ್ಲಿ ಖಂಡಿಸಿದ ಭಾರತ

ಪಿಟಿಐ
Published 1 ಏಪ್ರಿಲ್ 2021, 8:43 IST
Last Updated 1 ಏಪ್ರಿಲ್ 2021, 8:43 IST
ಮಿಲಿಟರಿ ಸರ್ಕಾರದ ವಿರುದ್ಧ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹೋರಾಟಗಳು (ಎಎಫ್‌ಪಿ ಚಿತ್ರ)
ಮಿಲಿಟರಿ ಸರ್ಕಾರದ ವಿರುದ್ಧ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹೋರಾಟಗಳು (ಎಎಫ್‌ಪಿ ಚಿತ್ರ)   

ವಿಶ್ವಸಂಸ್ಥೆ: ಮ್ಯಾನ್ಯಾರ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ದೌರ್ಜನ್ಯವನ್ನು ವಿಶ್ವಸಂಸ್ಥೆಯಲ್ಲಿ ಖಂಡಿಸಿರುವ ಭಾರತ,ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕು ಮತ್ತುಬಂಧಿತ ಎಲ್ಲ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮ್ಯಾನ್ಮಾರ್‌ನ ಪರಿಸ್ಥಿತಿಯ ಬಗ್ಗೆ ನಡೆದ ಸಮಾಲೋಚನೆಯ ಸಂದರ್ಭದಲ್ಲಿ ಭಾರತ ಈ ಕುರಿತು ಧ್ವನಿಯೆತ್ತಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಅವರು, ಸಭೆಯಲ್ಲಿನ ತಮ್ಮ ಹೇಳಿಕೆಯನ್ನು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ‘ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ, ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಲಾಯಿತು. ಗರಿಷ್ಠ ಸಂಯಮ, ಪ್ರಜಾಪ್ರಭುತ್ವ ಮರು ಸ್ಥಾಪನೆಯತ್ತ ದೃಢವಾದ ಬದ್ಧತೆ ಪ್ರದರ್ಶಿಸಲಾಯಿತು. ಬಂಧಿತ ನಾಯಕರ ಬಿಡುಗಡೆಗೆ ಒತ್ತಾಯಿಸುವುದರ ಜತೆಗೆ, ಈ ನಿಟ್ಟಿನಲ್ಲಿ ‘ಆಸಿಯಾನ್’‌ ದೇಶಗಳ ಪ್ರಯತ್ನವನ್ನು ಸ್ವಾಗತಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಪರಿಸ್ಥಿತಿಯನ್ನು ಶಾಂತಿಯುತವಾಗಿ ಪರಿಹರಿಸಬೇಕು. ಜನರ ಆಶಯ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಬದ್ಧತೆಯಿಂದ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳುವಿಕೆಯ ಅಗತ್ಯವಿದೆ. ಅಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವಾಗಬೇಕಿದೆ ಎಂಬುದನ್ನು ಒತ್ತಿ ಹೇಳಲಾಯಿತು’ ಎಂದು ತಿರುಮೂರ್ತಿ ತಿಳಿಸಿದ್ದಾರೆ.

ಕಳೆದ ವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು, ಮ್ಯಾನ್ಮಾರ್‌ನಲ್ಲಿ ಮಕ್ಕಳು ಮತ್ತು ಯುವ ಸಮುದಾಯದ ಮೇಲಿನ ಸೇನಾ ಪ್ರಹಾರವನ್ನು ಕಟುವಾದ ಪದಗಳಿಂದ ಖಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.