ADVERTISEMENT

ಹೊಸ ಎತ್ತರಕ್ಕೆ ಭಾರತ–ಈಜಿಪ್ಟ್‌ ಪಾಲುದಾರಿಕೆ

ಪಿಟಿಐ
Published 25 ಜೂನ್ 2023, 16:17 IST
Last Updated 25 ಜೂನ್ 2023, 16:17 IST
ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌–ಸಿಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ ‘ಆರ್ಡ್‌ ಆಫ್‌ ದಿ ನೈಲ್‌’ ಪ್ರದಾನ ಮಾಡಿದರು –ಪಿಟಿಐ ಚಿತ್ರ
ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌–ಸಿಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ ‘ಆರ್ಡ್‌ ಆಫ್‌ ದಿ ನೈಲ್‌’ ಪ್ರದಾನ ಮಾಡಿದರು –ಪಿಟಿಐ ಚಿತ್ರ    

ಕೈರೊ (ಈಜಿಪ್ಟ್‌): ರಾಜಕೀಯ ಮತ್ತು ಭದ್ರತೆಯಲ್ಲಿ ಸಹಕಾರ ಹೆಚ್ಚಿಸುವುದು ಸೇರಿದಂತೆ ಭಾರತ ಮತ್ತು ಈಜಿಪ್ಟ್‌ನ ರಾಜತಾಂತ್ರಿಕ ಪಾಲುದಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌–ಸಿಸಿ ಭಾನುವಾರ ಸಮ್ಮತಿಸಿದರು.

ಎರಡು ದಿನಗಳ ಈಜಿಪ್ಟ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಕುರಿತು ಇತ್ತಿಹಾದಿಯಾ ಅರಮನೆಯಲ್ಲಿ ಅಧ್ಯಕ್ಷ್ ಎಲ್‌–ಸಿಸಿ ಅವರೊಂದಿಗೆ ಮಾತುಕತೆ ನಡೆಸಿದರು.

ರಕ್ಷಣಾ ಕ್ಷೇತ್ರ, ವ್ಯಾಪಾರ ಮತ್ತು ಹೂಡಿಕೆ, ಭದ್ರತೆ ವಿಷಯದಲ್ಲಿ ಸಹಕಾರ ಹೆಚ್ಚಿಸುವುದು, ವಿಜ್ಞಾನ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮವನ್ನು ಮತ್ತಷ್ಟು ಬಲಪಡಿಸುವುದಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು.

ADVERTISEMENT

‘ಕೃಷಿ, ಸ್ಮಾರಕಗಳು ಹಾಗೂ ಪುರಾತತ್ವ ತಾಣಗಳ ಸಂರಕ್ಷಣೆ ಹಾಗೂ ಸ್ಪರ್ಧಾತ್ಮಕ ಕಾನೂನು ಕುರಿತ ಮೂರು ಮಹತ್ವದ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿದವು’ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ.

‘ಜಿ–20 ಗುಂಪಿನ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸುವುದು, ಆಹಾರ ಭದ್ರತೆ, ಹವಾಮಾನ ಬದಲಾವಣೆ ಹಾಗೂ ವಿಶ್ವದ ದಕ್ಷಿಣ ಭಾಗದಲ್ಲಿರುವ ದೇಶಗಳ ಪರವಾಗಿ ಒಕ್ಕೊರಲ ದನಿ ಎತ್ತುವ ಕುರಿತು ಮೋದಿ, ಅಬ್ದೆಲ್‌ ಚರ್ಚಿಸಿದರು.

‘ಸೆಪ್ಟೆಂಬರ್‌ನಲ್ಲಿ ನಡೆಯುವ ಜಿ–20 ಶೃಂಗಸಭೆಗೆ ಅಬ್ದೆಲ್‌ ಅವರಿಗೆ ಮೋದಿ ಇದೇ ಸಂದರ್ಭದಲ್ಲಿ ಆಹ್ವಾನ ನೀಡಿದರು’ ಎಂದು ತಿಳಿಸಿದ್ದಾರೆ.

ಮೋದಿಗೆ ‘ಆರ್ಡರ್‌ ಆಫ್‌ ದಿ ನೈಲ್‌’ ಪ್ರಶಸ್ತಿ

ಪ್ರದಾನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್‌ ಸಿಸಿ ಅವರು ಈಜಿಪ್ಟ್‌ನ ಅತ್ಯುನ್ನತ ಗೌರವ ‘ಆರ್ಡರ್‌ ಆಫ್‌ ದಿ ನೈಲ್‌’ ಅನ್ನು ಭಾನುವಾರ ಪ್ರದಾನ ಮಾಡಿದರು. ಇದು ಮೋದಿ ಅವರಿಗೆ ಪ್ರದಾನ ಮಾಡಲಾಗಿರುವ 13ನೇ ಅತ್ಯುನ್ನತ ಗೌರವ ಪುರಸ್ಕಾರವಾಗಿದೆ. ಈ ಗೌರವ ಪುರಸ್ಕಾರವನ್ನು 1925ರಲ್ಲಿ ಸ್ಥಾಪಿಸಲಾಗಿದೆ. ಈಜಿಪ್ಟ್‌ ಅಥವಾ ಮಾನವ ಕಲ್ಯಾಣಕ್ಕಾಗಿ ಅಮೂಲ್ಯ ಸೇವೆ ಸಲ್ಲಿಸಿದ ದೇಶಗಳ ಅಧ್ಯಕ್ಷ ಉಪಾಧ್ಯಕ್ಷ ಅಥವಾ ಪ್ರಧಾನಿ ಇಲ್ಲವೇ ರಾಜರಿಗೆ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.