
ಭಾರತ-ಅಮೆರಿಕ
ನ್ಯೂಯಾರ್ಕ್ (ಪಿಟಿಐ): ಭಾರತ– ಐರೋಪ್ಯ ಒಕ್ಕೂಟದೊಟ್ಟಿಗಿನ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಈ ಮೂಲಕ ಭಾರತವು ಜಾಗತಿಕ ವ್ಯಾಪಾರದ ವಿಷಯದಲ್ಲಿ ಮೇಲ್ಮಟ್ಟಕ್ಕೆ ಏರಿದಂತಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಹೇಳಿದರು.
ವ್ಯಾಪಾರ ಒಪ್ಪಂದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಗ್ರೀರ್ ಅವರು, ‘ಅದನ್ನು ಐತಿಹಾಸಿಕ ಒಪ್ಪಂದ ಎಂದು ವರ್ಣಿಸಲಾಗಿದೆ. ಒಪ್ಪಂದದ ಕೆಲವು ಅಂಶಗಳನ್ನು ಗಮನಿಸಿದೆ. ಇದರಿಂದ ಜಾಗತಿಕ ವ್ಯಾಪಾರದಲ್ಲಿ ಭಾರತವು ಹೊಸ ಶಕೆ ಆರಂಭಿಸಲಿದೆ’ ಎಂದು ಅವರು ತಿಳಿಸಿದರು.
‘ಒಪ್ಪಂದದ ಬಳಿಕ ಭಾರತವು ಹೆಚ್ಚುವರಿ ವಲಸೆ ಹಕ್ಕನ್ನು ಪಡೆಯುವ ಸಾಧ್ಯತೆ ಇದೆ. ಭಾರತೀಯ ಉದ್ಯೋಗಿಗಳ ಸಂಚಾರಕ್ಕೂ ಅವಕಾಶ ಮಾಡಿಕೊಡುವ ಬಗ್ಗೆ ಇ.ಯು ನಾಯಕರಾದ ಉರ್ಸುಲಾ ಫಾಂಡರ್ ಲೇಯನ್ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ’ ಎಂದರು.
‘ಅಮೆರಿಕವು ಜಾಗತೀಕರಣದ ಸಮಸ್ಯೆಗಳ ಇತ್ಯರ್ಥಕ್ಕೆ ಯತ್ನಿಸುತ್ತಿರುವಾಗಲೇ, ಐರೋಪ್ಯ ಒಕ್ಕೂಟವು ಜಾಗತಿಕ ವ್ಯಾಪಾರಕ್ಕೆ ಇನ್ನಷ್ಟು ವೇಗ ನೀಡುತ್ತಿರುವಂತೆ ಕಾಣುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.