ADVERTISEMENT

ಭಾರತ– ಐರೋಪ್ಯ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಬೇಸರ

ಪಿಟಿಐ
Published 29 ಜನವರಿ 2026, 15:27 IST
Last Updated 29 ಜನವರಿ 2026, 15:27 IST
ಸ್ಕಾಟ್‌ ಬೆಸೆಂಟ್‌
ಸ್ಕಾಟ್‌ ಬೆಸೆಂಟ್‌   

ನ್ಯೂಯಾರ್ಕ್‌: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವಿನ ‘ಮುಕ್ತ ವ್ಯಾಪಾರ ಒಪ್ಪಂದ’ದ (ಎಫ್‌ಟಿಎ) ಕುರಿತು ಬೇಸರ ವ್ಯಕ್ತಪಡಿಸಿರುವ ಅಮೆರಿಕ, ಈ ಕುರಿತ ಇಯು ನಿರ್ಧಾರವನ್ನು ನಿರಾಶಾದಾಯಕ ಎಂದು ಬಣ್ಣಿಸಿದೆ. 

‘ರಷ್ಯಾದಿಂದ ತೈಲ ಖರೀದಿಸುವ ಭಾರತದ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ್ದು ಐರೋಪ್ಯ ಒಕ್ಕೂಟಕ್ಕೆ ಇಷ್ಟವಾಗಲಿಲ್ಲ. ಹೀಗಾಗಿಯೇ ಅದು ನಮ್ಮೊಂದಿಗೆ ಕೈಜೋಡಿಸಲಿಲ್ಲ ಎಂಬುದು ಈ ಒಪ್ಪಂದದಿಂದ ಸ್ಪಷ್ಟವಾಗುತ್ತದೆ’ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಹೇಳಿದ್ದಾರೆ. 

‘ಯುರೋಪಿನಲ್ಲಿ ಉಕ್ರೇನ್‌–ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿತ್ತು ಮತ್ತು ಅದರ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸುತ್ತಿದ್ದವರು ಯಾರು? ಯುರೋಪಿಯನ್ನರು ತಾನೇ. ಅಂದರೆ ಯುರೋಪಿಯನ್ನರು ಈ ಭಾರತದ ಮೂಲಕ ರಷ್ಯಾಗೆ ಹಣಕಾಸು ಒದಗಿಸುತ್ತಿದ್ದಾರೆ’ ಎಂದು ಅವರು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.  

ADVERTISEMENT

‘ಐರೋಪ್ಯ ಒಕ್ಕೂಟದವರಿಗೆ ಉಕ್ರೇನ್‌ ಜನರಿಗಿಂತ ವ್ಯಾಪಾರ ಮುಖ್ಯವಾಗಿದೆ. ಅವರಿಗೆ ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವುದು ಬೇಕಿಲ್ಲ ಎನಿಸುತ್ತದೆ’ ಎಂದು ಬೆಸೆಂಟ್‌ ದೂರಿದ್ದಾರೆ.  

ಭಾರತ ಮತ್ತು ಐಯು ನಡುವೆ ಮಂಗಳವಾರ ‘ಮುಕ್ತ ವ್ಯಾಪಾರ ಒಪ್ಪಂದ’ (ಎಫ್‌ಟಿಎ) ಏರ್ಪಟ್ಟ ಬೆನ್ನಲ್ಲೇ ಅವರು ಪ್ರತಿಕ್ರಿಯಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.