ಶಶಿ ತರೂರ್
(ಪಿಟಿಐ ಚಿತ್ರ)
ಜಾರ್ಜ್‌ಟೌನ್(ಗಯಾನಾ): ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಗಯಾನಾ ದೇಶವು ಅಚಲ ಬೆಂಬಲವನ್ನು ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ಸಂಸದೀಯ ನಿಯೋಗವು, ಗಯಾನಾದ ಉಪಾಧ್ಯಕ್ಷ ಭರತ್ ಜಗದೇವ್ ಮತ್ತು ಪ್ರಧಾನಿ ಮಾರ್ಕ್ ಫಿಲಿಪ್ಸ್ ಅವರನ್ನು ಭೇಟಿಯಾಗಿ ಭಾರತದ ನಿಲುವನ್ನು ವಿವರಿಸಿದ್ದಾರೆ.
ಈ ಕುರಿತು ಜಾರ್ಜ್‌ಟೌನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮಾಹಿತಿ ನೀಡಿದೆ.
'ಅಧ್ಯಕ್ಷರ ಕಚೇರಿಯಲ್ಲಿ ಭಾರತದ ನಿಯೋಗವು ಗಯಾನಾ ನಾಯಕರೊಂದಿಗೆ ಅತ್ಯುತ್ತಮ ಸಭೆ ನಡೆಸಿತು' ಎಂದು ತರೂರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಭಾರತದ ಕಳವಳಗಳಿಗೆ ಬೆಂಬಲ ವ್ಯಕ್ತಪಡಿಸುವುದರ ಜತೆಗೆ ತೈಲ ಮತ್ತು ಅನಿಲದ ನಿಕ್ಷೇಪದೊಂದಿಗೆ ಗಯಾನಾದಲ್ಲಿ ದಾಖಲೆಯ ಶೇ 30ರಷ್ಟು ವಾರ್ಷಿಕ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಯಿತು' ಎಂದು ಅವರು ತಿಳಿಸಿದ್ದಾರೆ.
'ಕೃಷಿಯಿಂದ ಹಿಡಿದು ದೂರಸಂಪರ್ಕ, ಬ್ಯಾಂಕಿಂಗ್ ಮತ್ತು ಹೆದ್ದಾರಿ ಅಭಿವೃದ್ಧಿಗಳಲ್ಲಿ ಭಾರತೀಯ ಕಂಪನಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಯ ಕುರಿತು ಉಲ್ಲೇಖಿಸಲಾಗಿದೆ. ಗಯಾನಾದಲ್ಲಿ ಕಾರ್ಮಿಕರ ಕೊರತೆಯಿದ್ದು, ಭಾರತದ ನೆರವನ್ನು ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ.
ಗಯಾನಾದ 59ನೇ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಪ್ರಧಾನಿ ಮಾರ್ಕ್ ಫಿಲಿಪ್ಸ್ ಅವರ ನೇತೃತ್ವದಲ್ಲಿ ಭಾರತದ ನಿಯೋಗಕ್ಕೆ ಔತಣಕೂಟವನ್ನು ಏರ್ಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.