
ಬೀಜಿಂಗ್: ಶಾಂಘೈನಲ್ಲಿ ಭಾರತದ ಹೊಸ ಅತ್ಯಾಧುನಿಕ ರಾಯಭಾರಿ ಕಚೇರಿಯ ಕಟ್ಟಡವನ್ನು ಚೀನಾದಲ್ಲಿನ ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಭಾನುವಾರ ಉದ್ಘಾಟಿಸಿದರು.
32 ವರ್ಷಗಳ ನಂತರ ಕಚೇರಿಯನ್ನು ಹೊಸ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ಚಾಂಗ್‌ನಿಂಗ್ ಜಿಲ್ಲೆಯ ಪ್ರಮುಖ ಡಾನಿಂಗ್ ಸೆಂಟರ್‌ನಲ್ಲಿ 1,436 ಚದರ ಮೀಟರ್ ವಿಸ್ತೀರ್ಣದ ಹೊಸ ಕಟ್ಟಡವು ಹಿಂದಿನದ್ದಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ. ಇದು ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಡಿ.8ರಿಂದ ಆರಂಭಿಸಲಿದೆ.
ಚೀನಾದ ಪೂರ್ವ ಪ್ರದೇಶದಲ್ಲಿ ವ್ಯಾಪಾರ ನಡೆಸುತ್ತಿರುವ ಭಾರತೀಯ ಉದ್ಯಮಿಗಳ ಸಮೂಹದ ಅಗತ್ಯಗಳನ್ನು ಪೂರೈಸಲು ಇದು ಸಹಕಾರಿಯಾಗಲಿದೆ. ಶಾಂಘೈ ಪ್ರದೇಶವು ಯಿವು ಪಟ್ಟಣದಂತಹ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳಿಗೆ ನೆಲೆಯಾಗಿದೆ. ಅಲ್ಲಿ ಭಾರತೀಯರಿಗೆ ಸೇರಿದ ಅನೇಕ ಕಂಪನಿಗಳಿವೆ.
‘ಭಾರತ ಮತ್ತು ಚೀನಾ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆಯು ಈ ವರ್ಷವನ್ನು ವಿಶಿಷ್ಟವಾಗಿಸಿದೆ. ಇದು ವಿಶ್ವದರ್ಜೆಯ ಅಂತರರಾಷ್ಟ್ರೀಯ ಮಟ್ಟದ ರಾಯಭಾರಿ ಕಚೇರಿಯಾಗಿದೆ’ ಎಂದು ರಾವತ್ ಹೇಳಿದ್ದಾರೆ.
ರಾಜತಾಂತ್ರಿಕ ಕಚೇರಿಯ ಪ್ರತಿನಿಧಿಗಳು, ಶಾಂಘೈನ ಸ್ಥಳೀಯ ಆಡಳಿತದ ಅಧಿಕಾರಿಗಳು, ಚೀನಾದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ಭಾರತೀಯ ಸಂಜಾತರರು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.