ADVERTISEMENT

ವೈಜ್ಞಾನಿಕ ಲೇಖನಗಳ ಪ್ರಕಟಣೆ: ವಿಶ್ವದಲ್ಲೇ ಭಾರತಕ್ಕೆ ಮೂರನೇ ಸ್ಥಾನ

ಪಿಟಿಐ
Published 18 ಡಿಸೆಂಬರ್ 2019, 19:31 IST
Last Updated 18 ಡಿಸೆಂಬರ್ 2019, 19:31 IST

ವಾಷಿಂಗ್ಟನ್‌ : ಭಾರತವು 1.35 ಲಕ್ಷಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದ್ದು, ವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಷಯದ ಲೇಖನಗಳ ಪ್ರಕಟಣೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದು ಅಮೆರಿಕದ ಸರ್ಕಾರಿ ಸಂಸ್ಥೆಯ ವರದಿ ಹೇಳಿದೆ.

ಮೊದಲನೇ ಸ್ಥಾನದಲ್ಲಿ ಚೀನಾ ಹಾಗೂ ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ. ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು (ಎನ್‌ಎಸ್‌ಎಫ್‌) ವಿಶ್ವದಲ್ಲಿ ಪ್ರಕಟವಾದ ವೈಜ್ಞಾನಿಕ ಲೇಖನಗಳ ಅಂಕಿ–ಸಂಖ್ಯೆಗಳನ್ನು ಕ್ರೋಡೀಕರಿಸಿ ವರದಿ ಪ್ರಕಟಿಸಿದೆ. 2008 ರಲ್ಲಿ 17,55,850 ಲೇಖನಗಳು ಪ್ರಕಟಗೊಂಡಿದ್ದರೆ, 2018ರಲ್ಲಿ 25,55,959 ವೈಜ್ಞಾನಿಕ ಲೇಖನಗಳು ಪ್ರಕಟಗೊಂಡಿವೆ ಎಂದು ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಜರ್ನಲ್‌ ಲೇಖನಗಳು ಹಾಗೂ ಸಮ್ಮೇಳನಗಳಲ್ಲಿ ಮಂಡಿಸಿದ ಸಂಶೋಧನಾ ಲೇಖನಗಳನ್ನು ಪರಿಗಣಿಸಿ, ಪರಾಮರ್ಶಿಸಿ ವರದಿ ಪ್ರಕಟಿಸಲಾಗಿದ್ದು, ಕಳೆದ 10 ವರ್ಷಗಳಲ್ಲಿ ವಾರ್ಷಿಕವಾಗಿ ಶೇ 4 ರಷ್ಟು ಹೆಚ್ಚಾಗಿದೆ.

ADVERTISEMENT

ಈ ಅಂಕಿ–ಸಂಖ್ಯೆಗಳ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಭಾರತ 2008ರಲ್ಲಿ 48,998 ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಲೇಖನಗಳನ್ನು ಪ್ರಕಟಿಸಿದೆ. 2018ರಲ್ಲಿ 1,35,788 ಲೇಖನಗಳನ್ನು ಪ್ರಕಟಿಸಿದ್ದು, ವಾರ್ಷಿಕ ಪ್ರಗತಿ ಸರಾಸರಿ ಶೇ 10.73 ರಷ್ಟಾಗಿದೆ. ವಿಶ್ವದಲ್ಲಿ ಪ್ರಕಟಗೊಂಡಿರುವ ಲೇಖನಗಳಲ್ಲಿ ಭಾರತದ ಪಾಲು ಶೇ 5.31 ರಷ್ಟಿದೆ.

ವಿಶ್ವದಲ್ಲಿ ಪ್ರಕಟಗೊಂಡಿರುವ ಲೇಖನಗಳಲ್ಲಿ ಚೀನಾದ ಪಾಲು ಶೇ 20.67 ಮತ್ತು ಅಮೆರಿಕದ ಪಾಲು ಶೇ 16.54 ರಷ್ಟಿದೆ.ನಂತರದ ಸ್ಥಾನಗಳಲ್ಲಿ ಜರ್ಮನಿ, ಜಪಾನ್‌, ಬ್ರಿಟನ್‌, ರಷ್ಯಾ, ಇಟಲಿ, ದಕ್ಷಿಣ ಕೊರಿಯಾ ಹಾಗೂ ಫ್ರಾನ್ಸ್‌ ರಾಷ್ಟ್ರಗಳಿವೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.