ADVERTISEMENT

ಮ್ಯಾನ್ಮಾರ್‌ನಲ್ಲಿನ ಅಸ್ಥಿರತೆಯಿಂದಲೂ ಭಾರತದ ಮೇಲೆ ನೇರ ಪರಿಣಾಮ: ತಿರುಮೂರ್ತಿ

ಪಿಟಿಐ
Published 3 ಆಗಸ್ಟ್ 2021, 8:03 IST
Last Updated 3 ಆಗಸ್ಟ್ 2021, 8:03 IST
ಟಿ.ಎಸ್.ತಿರುಮೂರ್ತಿ
ಟಿ.ಎಸ್.ತಿರುಮೂರ್ತಿ   

ವಿಶ್ವಸಂಸ್ಥೆ: ‘ಮ್ಯಾನ್ಮಾರ್‌ನಲ್ಲಿನ ಯಾವುದೇ ಅಸ್ಥಿರತೆಯೂ ಭಾರತದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಮ್ಯಾನ್ಮಾರ್‌ ಅನ್ನು ಇನ್ನಷ್ಟು ಅಸ್ಥಿರಗೊಳಿಸುವ ಅಂತರರಾಷ್ಟ್ರೀಯ ಸಮುದಾಯದ ಕ್ರಮವನ್ನು ಭಾರತ ಬೆಂಬಲಿಸುವುದಿಲ್ಲ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್‌ ತಿಂಗಳ ಅಧ್ಯಕ್ಷ, ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭದ್ರತಾ ಮಂಡಳಿಯ ಕಾರ್ಯಕ್ರಮಗಳ ಬಗ್ಗೆ ಸೋಮವಾರ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ತಿರುಮೂರ್ತಿ ಅವರು,‘ನಮಗೆ ಮ್ಯಾನ್ಮಾರ್‌ ಅತ್ಯಂತ ಪ್ರಮುಖ ನೆರೆರಾಷ್ಟ್ರವಾಗಿದೆ. ಹಾಗಾಗಿ ಮ್ಯಾನ್ಮಾರ್‌ಗೆ ಸಂಬಂಧಿತ ಬೆಳವಣಿಗೆಗಳು ಕೂಡ ನಮಗೆ ಮಹತ್ವದ್ದಾಗಿದೆ. ಮ್ಯಾನ್ಮಾರ್‌ನ ಪರಿಸ್ಥಿತಿಯು ಭಾರತದ ಮೇಲೆ ನೇರ ಪರಿಣಾಮ ಬೀರುತ್ತದೆ’ ಎಂದರು.

‘ಮ್ಯಾನ್ಮಾರ್‌ ಕುರಿತಾಗಿ ಭಾರತದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ. ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರವನ್ನು ನಾವು ಕೂಡ ಖಂಡಿಸುತ್ತೇವೆ. ಮ್ಯಾನ್ಮಾರ್‌ಗೆ ಬಂಧಿತ ನಾಯಕರನ್ನು ಬಿಡುಗಡೆ ಮಾಡುವಂತೆ ಭಾರತ ಒತ್ತಾಯಿಸಿದೆ. ಅಲ್ಲದೆ ಪ್ರಜಾಪ್ರಭುತ್ವಕ್ಕಾಗಿ ಕಾನೂನು ನಿಯಮಗಳಂತೆ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದೆ’ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಆಸಿಯಾನ್‌ ಪ್ರಯತ್ನಿಸುತ್ತಿದೆ. ಭಾರತ ಕೂಡ ಆಸಿಯಾನ್‌ ಮತ್ತು ಅದರ ಐದು ಅಂಶಗಳನ್ನು ಬೆಂಬಲಿಸುತ್ತದೆ’ ಎಂದು ಅವರು ಹೇಳಿದರು.

ಮ್ಯಾನ್ಮಾರ್‌ನಿಂದ ಆಶ್ರಯ ಬಯಸಿ ಭಾರತಕ್ಕೆ ಬರುತ್ತಿರುವವರನ್ನು ತಡೆಯಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಾಗಲೇ ಭಾರತದಲ್ಲಿ ಮ್ಯಾನ್ಮಾರ್‌ನಿಂದ ಆಗಮಿಸಿದ ಹಲವಾರು ಮಂದಿ ಇದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.