ADVERTISEMENT

ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಭಾರತ–ಒಮಾನ್ ಸಹಿ

ಪಿಟಿಐ
Published 18 ಡಿಸೆಂಬರ್ 2025, 15:59 IST
Last Updated 18 ಡಿಸೆಂಬರ್ 2025, 15:59 IST
<div class="paragraphs"><p>ಮಸ್ಕತ್‌ನಲ್ಲಿ ಗುರುವಾರ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಒಮಾನ್‌ ದೊರೆ&nbsp;ಸೈಯಿದ್‌ ಹೈಥಮ್‌ ಬಿನ್‌ ತಾರಿಕ್‌ </p></div>

ಮಸ್ಕತ್‌ನಲ್ಲಿ ಗುರುವಾರ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಒಮಾನ್‌ ದೊರೆ ಸೈಯಿದ್‌ ಹೈಥಮ್‌ ಬಿನ್‌ ತಾರಿಕ್‌

   

– ಪಿಟಿಐ ಚಿತ್ರಗಳು

ಮಸ್ಕತ್‌: ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಟಿಎ) ಭಾರತ ಮತ್ತು ಒಮಾನ್‌ ಗುರುವಾರ ಸಹಿ ಹಾಕಿವೆ. ಈ ಒಪ್ಪಂದವು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹೊಸ ಭರವಸೆ ಮತ್ತು ಬಲವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.

ADVERTISEMENT

ಭಾರತ–ಒಮಾನ್‌ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಒಪ್ಪಂದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಮತ್ತು ಪರಸ್ಪರ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತದೆ. ಪ್ರತಿಯೊಂದು ವಲಯದಲ್ಲಿಯೂ ಅವಕಾಶದ ಹೊಸ ಬಾಗಿಲನ್ನು ತೆರೆಯುತ್ತದೆ’ ಎಂದಿದ್ದಾರೆ.

ಈ ಒಪ್ಪಂದವು ಗಲ್ಫ್‌ ದೇಶದ ಜವಳಿ, ಕೃಷಿ ಮತ್ತು ಚರ್ಮದ ಉತ್ಪನ್ನಗಳು ಸೇರಿದಂತೆ ಭಾರತದಿಂದ ರಫ್ತಾಗುವ ಶೇ 98ರಷ್ಟು ವಸ್ತುಗಳಿಗೆ ತೆರಿಗೆ ಮುಕ್ತ ಪ್ರವೇಶ ಒದಗಿಸುತ್ತದೆ.

‘ಭಾರತವು ಯಾವಾಗಲೂ ಪ್ರಗತಿಪರ ಮತ್ತು ಸ್ವಾವಲಂಬಿ ದೇಶವಾಗಿದೆ. ಭಾರತ ಬೆಳೆದಂತೆಲ್ಲ, ಅದು ತನ್ನ ಸ್ನೇಹಿತರಿಗೂ ಬೆಳೆಯಲು ಸಹಾಯ ಮಾಡುತ್ತದೆ. ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗುವತ್ತ ಸಾಗಿದೆ. ಇದು ಇಡೀ ಜಗತ್ತಿಗೆ ಪ್ರಯೋಜನಕಾರಿ. ಅದರಲ್ಲೂ ಒಮಾನ್‌ ಭಾರತದ ಆತ್ಮೀಯ ದೇಶವಾಗಿರುವುದರಿಂದ ಅದಕ್ಕೆ ಹೆಚ್ಚು ಪ್ರಯೋಜನವಾಗಲಿದೆ’ ಎಂದು ಹೇಳಿದ್ದಾರೆ. 

‘ಭಾರತ ಮತ್ತು ಒಮಾನ್‌ನ ವ್ಯಾವಹಾರಿಕ ಸಂಬಂಧವು ತಲೆಮಾರುಗಳಿಂದ ನಂಬಿಕೆಯ ಬುನಾದಿಯ ಮೇಲೆ ನಿಂತಿದೆ. ಉಭಯ ದೇಶಗಳ ನಾವು ಪರಸ್ಪರ ಮಾರುಕಟ್ಟೆಗಳನ್ನು ಅರ್ಥಮಾಡಿಕೊಂಡಿದ್ದೇವೆ’ ಎಂದಿದ್ದಾರೆ.

ಅಭಿವೃದ್ಧಿಯಲ್ಲಿ ಪಾಲುದಾರರಾಗುವಂತೆ ಒಮಾನ್‌ ಕಂಪನಿಗಳಿಗೆ ಪ್ರಧಾನಿ ಕರೆ ನೀಡಿದ್ದಾರೆ.

ಎರಡು ದಿನಗಳ ಮಸ್ಕತ್‌ ಭೇಟಿಯನ್ನು ಪ್ರಧಾನಿ ಅಂತ್ಯಗೊಳಿಸಿ, ಭಾರತದತ್ತ ಪ್ರಯಾಣ ಬೆಳೆಸಿದರು.

ಮೈತ್ರಿ ಪರ್ವ’ದಲ್ಲಿ ಪ್ರಧಾನಿ ಮಾತು

21ನೇ ಶತಮಾನದಲ್ಲಿ ಭಾರತವು ತ್ವರಿತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ದೊಡ್ಡ ಗುರಿಗಳನ್ನು ಇಟ್ಟುಕೊಂಡು ನಿರ್ದಿಷ್ಟ ಸಮಯದಲ್ಲಿ ಫಲಿತಾಂಶ ಪಡೆಯುವುದು ಇದರ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. ಮಸ್ಕತ್‌ನಲ್ಲಿ ನಡೆದ ‘ಮೈತ್ರಿ ಪರ್ವ’ ಕಾರ್ಯಕ್ರಮದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು ‘ನಮ್ಮ ದೀಪ ಈಗ ನಮ್ಮ ಮನೆಗಳಲ್ಲಿ ಮಾತ್ರವಲ್ಲದೆ ಇಡೀ ಜಗತ್ತನ್ನೇ ಬೆಳಗುತ್ತಿದೆ’ ಎಂದಿದ್ದಾರೆ.   ‘ದೀಪಾವಳಿ ಹಬ್ಬಕ್ಕೆ ದೊರೆತಿರುವ ಜಾಗತಿಕ ಮನ್ನಣೆಯು ಭರವಸೆ ಸೌಹಾರ್ದ ಮತ್ತು ಮಾನವೀಯತೆಯ ಸಂದೇಶ ಹರಡುವ ನಮ್ಮ ಗುರಿಗೆ ಸಿಕ್ಕ ಗೌರವವಾಗಿದೆ. ಇದು ಎಲ್ಲ ಭಾರತೀಯರು ಹೆಮ್ಮೆಪಡುವ ವಿಷಯವಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.