ADVERTISEMENT

ನೇಪಾಳ– ಭಾರತ ಪರಮಾಪ್ತ ಸ್ನೇಹಿತರು, ಅಭಿವೃದ್ಧಿಯ ಪಾಲುದಾರರು: ಶ್ರಿಂಗ್ಲಾ ಬಣ್ಣನೆ

ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಬಣ್ಣನೆ

ಪಿಟಿಐ
Published 27 ನವೆಂಬರ್ 2020, 10:50 IST
Last Updated 27 ನವೆಂಬರ್ 2020, 10:50 IST
ಹರ್ಷವರ್ಧನ ಶ್ರಿಂಗ್ಲಾ
ಹರ್ಷವರ್ಧನ ಶ್ರಿಂಗ್ಲಾ   

ಕಠ್ಮಂಡು: ‘ನೇಪಾಳವನ್ನು ಭಾರತವು ತನ್ನ ಪರಮಾಪ್ತ ಸ್ನೇಹಿತ ಮತ್ತು ಅಭಿವೃದ್ಧಿಯ ಪಾಲುದಾರನನ್ನಾಗಿ ನೋಡಲು ಇಷ್ಟಪಡುತ್ತದೆ’ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಹೇಳಿದರು.

ಶುಕ್ರವಾರ ಇಲ್ಲಿನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಡಿಪ್ಲೊಮಸಿ ಅಂಡ್‌ ಇಂಟರ್‌ನ್ಯಾಷನಲ್ ಅಫೇರ್ಸ್‌ (ಎಐಡಿಐಎ) ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರಿಂಗ್ಲಾ, ‘ಉಭಯ ರಾಷ್ಟ್ರಗಳು ತಮ್ಮ ನಡುವಿನ ಸಹಕಾರ ಬಾಂಧವ್ಯಗಳನ್ನು ವೃದ್ಧಿಗೊಳಿಸುವ ಅವಶ್ಯಕತೆ ಇದೆ‘ ಎಂದು ಪ್ರತಿಪಾದಿಸಿದರು.

ಇಪ್ಪತ್ತೈದು ನಿಮಿಷಗಳ ಉಪನ್ಯಾಸದಲ್ಲಿ ಭಾರತ ಮತ್ತು ನೇಪಾಳದ ನಡುವಿನ ಸಂಬಂಧಗಳನ್ನು ವಿವರಿಸಿದರು. ‘ನೇಪಾಳ ಮತ್ತು ಭಾರತ ರಾಷ್ಟ್ರಗಳು ತಮ್ಮ ನಾಗರಿಕತೆಯ ‍ಪರಂಪರೆ, ಸಂಸ್ಕೃತಿ ಮತ್ತು ಆಚರಣೆಗಳನ್ನು ಹಂಚಿಕೊಂಡಿವೆ’ ಎಂದ ಅವರು, ಭಾರತ ‘ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌‘ ಎಂಬ ಧ್ಯೇಯ ಹೊಂದಿದ್ದರೆ, ನೇಪಾಳದ್ದು, ‘ಸಮೃದ್ಧ ನೇಪಾಳ ಮತ್ತು ಸುಖಿ ನೇಪಾಳ‘ ಎಂಬುದಾಗಿದೆ. ಎರಡೂ ದೇಶಗಳ ಉದ್ದೇಶಗಳಲ್ಲೂ ಹೋಲಿಕೆ ಇದೆ ಎಂದರು.

ADVERTISEMENT

‘ಅಭಿವೃದ್ಧಿ, ಸಹಕಾರ, ಸಂಪರ್ಕ, ಮೂಲ ಸೌಕರ್ಯ ಮತ್ತು ಆರ್ಥಿಕ ಯೋಜನೆಗಳ ವಿಸ್ತರಣೆ– ಈ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ನೇಪಾಳದೊಂದಿಗೆ ಭಾರತ ಸಂಬಂಧವನ್ನು ಹೊಂದಿದೆ’ ಎಂದು ಅವರು ಹೇಳಿದರು.

ನೇಪಾಳದ ವಿದೇಶಾಂಗ ಕಾರ್ಯದರ್ಶಿ ಆಹ್ವಾನದ ಮೇಲೆ ಶ್ರಿಂಗ್ಲಾ ಎರಡು ದಿನಗಳ ನೇಪಾಳ ಭೇಟಿ ಕೈಗೊಂಡಿದ್ದಾರೆ. ಗುರುವಾರ ನೇಪಾಳ ಪ್ರಧಾನಿಯನ್ನು ಭೇಟಿಯಾದ ಶ್ರಿಂಗ್ಲಾ ಅವರು, ಶುಕ್ರವಾರ ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.