ADVERTISEMENT

ಭಾರತದ ಅಕ್ಕಿಗೆ ಹೆಚ್ಚಿನ ತೆರಿಗೆ: ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ

ಪಿಟಿಐ
Published 9 ಡಿಸೆಂಬರ್ 2025, 15:52 IST
Last Updated 9 ಡಿಸೆಂಬರ್ 2025, 15:52 IST
   

ನ್ಯೂಯಾರ್ಕ್‌/ವಾಷಿಂಗ್ಟನ್‌: ಭಾರತವು, ಬಾಸ್ಮತಿ, ಸೋನಾ ಮಸೂರಿ ಸೇರಿದಂತೆ ವಿವಿಧ ತಳಿಗಳ ಅಕ್ಕಿಯನ್ನು ತಂದು ಅಮೆರಿಕದ ಮಾರುಕಟ್ಟೆಗೆ ಸುರಿಯುತ್ತಿದ್ದು, ಆಮದು ನಿಯಂತ್ರಿಸಲು ಅಕ್ಕಿ ಮೇಲೆ ಹೆಚ್ಚಿನ ತರಿಗೆ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. 

ಸೋಮವಾರ ವೈಟ್‌ಹೌಸ್‌ನಲ್ಲಿ ಕೃಷಿ ವಲಯದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, ಲೂಸಿಯಾನದ ಕೆನಡಿ ಅಕ್ಕಿ ಗಿರಣಿಯ ಮೆರಿಲ್‌ ಕೆನಡಿ ಅವರು, ‘ಭಾರತ, ಥಾಯ್ಲೆಂಡ್‌ ಮತ್ತು ಚೀನಾ ಅಮೆರಿಕದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ತಂದು ಸುರಿಯುತ್ತಿವೆ. ಇದರಿಂದ ಅಮೆರಿಕದ ಅಕ್ಕಿ ಉತ್ಪಾದಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಲ್ಲಿ ಭಾರತದ ಪಾಲು ಗರಿಷ್ಠ ಮಟ್ಟದಲ್ಲಿದೆ’ ಎಂದು ದೂರಿದರು. 

‘ಯಾಕೆ, ಭಾರತ ಅಮೆರಿಕದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ತಂದು ಸುರಿಯುತ್ತಿದೆ. ಭಾರತದ ಅಕ್ಕಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆಯೇ’ ಎಂದು ಟ್ರಂಪ್‌, ಸಭೆಯಲ್ಲಿ ಹಾಜರಿದ್ದ ಖಜಾನೆ ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಅವರನ್ನು ಪ್ರಶ್ನಿಸಿದರು. ‘ಇಲ್ಲ, ನಾವು ಈ ಬಗ್ಗೆ ಶೀಘ್ರದಲ್ಲೇ ಹೊಸ ಒಪ್ಪಂದ ಮಾಡಿಕೊಳ್ಳುತ್ತೇವೆ’ ಎಂದು ಬೆಸೆಂಟ್ ಹೇಳಿದರು. 

ADVERTISEMENT

‘ಅಮೆರಿಕನ್ನರಿಗೆ ಬೇಕಾಗುವಷ್ಟು ಭತ್ತವನ್ನು ಅಮೆರಿಕದ ರೈತರೇ ಬೆಳೆಯುತ್ತಾರೆ. ನಮಗೆ ಬೇರೆ ದೇಶಗಳೊಂದಿಗೆ ನ್ಯಾಯಯುತ ವ್ಯಾಪಾರ ಬೇಕೇ ಹೊರತು, ಉಚಿತ ವ್ಯಾಪಾರವಲ್ಲ. ಅಕ್ಕಿ ಆಮದಿನ ಮೇಲೆ ನಿಯಂತ್ರಣ ಹೇರಬೇಕು‘ ಎಂದು ಕೆನಡಿ, ಟ್ರಂಪ್‌ ಅವರನ್ನು ಒತ್ತಾಯಿಸಿದರು.   

‘ಭಾರತವು ಅಮೆರಿಕದ ಮಾರುಕಟ್ಟೆಗೆ ಅಕ್ಕಿಯನ್ನು ತಂದು ಸುರಿಯಬಾರದು. ‘ತೆರಿಗೆ’ ವಿಧಿಸುವ ಮೂಲಕ ಈ ಸಮಸ್ಯೆಯನ್ನು ನಾವು ಸರಳವಾಗಿ ಬಗೆಹರಿಸಿಕೊಳ್ಳಬಹುದು’ ಎಂದು ಟ್ರಂಪ್‌ ಹೇಳಿದರು.

ಭಾರತದಿಂದ ಆಮದು ಮಾಡಿಕೊಳ್ಳುವ ಅಕ್ಕಿಯ ಮೇಲೆ ಅಮೆರಿಕವು ಮೊದಲು ಶೇ 10ರಷ್ಟು ತೆರಿಗೆ ವಿಧಿಸಿತ್ತು. ಟ್ರಂಪ್‌ ಆಡಳಿತವು ಇತ್ತೀಚೆಗೆ ತೆರಿಗೆ ಪರಿಷ್ಕರಣೆ ಮಾಡಿದ ಬಳಿಕ ಇದು ಶೇ 40ಕ್ಕೆ ಏರಿಕೆಯಾಗಿದೆ. 

ಸಭೆ ಮುಗಿದ ಬಳಿಕ ಟ್ರಂಪ್‌, ಅಮೆರಿಕದ ಕೃಷಿಕರಿಗಾಗಿ ನಾಲ್ಕು ವರ್ಷಗಳ ಅವಧಿಗೆ 12 ಶತಕೋಟಿ ಡಾಲರ್‌ (₹1.07 ಲಕ್ಷ ಕೋಟಿ) ಕೃಷಿ ಪರಿಹಾರ ಪ್ಯಾಕೇಜ್‌ ಪ್ರಕಟಿಸಿದರು. ಕೃಷಿ ಕಾರ್ಯದರ್ಶಿ ಬ್ರೂಕ್‌ ರೋಲಿನ್ಸ್‌, ಕೃಷಿ ವಲಯದ ಪ್ರತಿನಿಧಿಗಳು, ಟ್ರಂಪ್‌ ಸಂಪುಟದ ಸದಸ್ಯರು ಭಾಗವಹಿಸಿದ್ದರು.

ತೆರಿಗೆ ಹೇರಿಕೆಯು ಭಾರತದ ಅಕ್ಕಿ ರಫ್ತಿನ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಹುದಷ್ಟೇ. ಹೊಸ ಕಾರ್ಯತಂತ್ರ ಅಳವಡಿಸಿಕೊಂಡರೆ ಅಮೆರಿಕದಲ್ಲಿ ಅಕ್ಕಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ನಮಗೆ ಇನ್ನೂ ಹೆಚ್ಚಿನ ಅವಕಾಶಗಳಿವೆ 
– ಪ್ರೇಮ್‌ ಗಾರ್ಗ್, ಭಾರತೀಯ ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ   
ಅಮೆರಿಕ  ಆಮದು ಸುಂಕವನ್ನು ಎಷ್ಟೇ ಹೆಚ್ಚಿಸಿದರೂ ಅಲ್ಲಿನ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಯ ಬೇಡಿಕೆ ಕುಸಿಯುವುದಿಲ್ಲ. ಭಾರತದ ಅಕ್ಕಿ ರಫ್ತುದಾರರಿಗೆ ಇದರಿಂದ ಯಾವುದೇ ನಷ್ಟವಿಲ್ಲ
– ಸತೀಶ್‌ ಗೋಯಲ್‌, ಅಖಿಲ ಭಾರತ ಅಕ್ಕಿ ರಫ್ತುದಾರರ ಒಕ್ಕೂಟದ ಅಧ್ಯಕ್ಷ

ಅಮೆರಿಕಕ್ಕೆ 2.74 ಲಕ್ಷ ಟನ್‌ ಬಾಸ್ಮತಿ ಅಕ್ಕಿ ರಫ್ತು

ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಅಮೆರಿಕವು ಭಾರತಕ್ಕೆ ವಿಶ್ವದಲ್ಲೇ ನಾಲ್ಕನೆಯ ಅತಿದೊಡ್ಡ ಮಾರುಕಟ್ಟೆ. 2024–25ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತವು ಅಮೆರಿಕಕ್ಕೆ 337 ದಶಲಕ್ಷ ಡಾಲರ್‌ (₹3028 ಕೋಟಿ)  ಮೌಲ್ಯದ   2.74 ಲಕ್ಷ ಟನ್‌ನಷ್ಟು ಅಕ್ಕಿಯನ್ನು ರಫ್ತು ಮಾಡಿದೆ. ಇದೇ ಅವಧಿಯಲ್ಲಿ 61 ಸಾವಿರ ಟನ್‌ನಷ್ಟು ಬಾಸ್ಮತಿಯೇತರ ಅಕ್ಕಿಯನ್ನೂ ಅಮೆರಿಕಕ್ಕೆ ರಫ್ತು ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.