ADVERTISEMENT

ವಿಶ್ವಸಂಸ್ಥೆ| ಜಮ್ಮು ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನ; ಉತ್ತರಿಸಿದ ಭಾರತ

ಪಿಟಿಐ
Published 8 ಮಾರ್ಚ್ 2023, 17:49 IST
Last Updated 8 ಮಾರ್ಚ್ 2023, 17:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ವಿಶ್ವಸಂಸ್ಥೆಯ ರಕ್ಷಣಾ ಸಭೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲ್‌ವಾಲ್‌ ಭುಟ್ಟೊ ಜರ್ದಾರಿ ಅವರು ಜಮ್ಮು ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಭಾರತ, ‘ದುರುದ್ದೇಶಪೂರಿತ ಪ್ರಚಾರದ ಗೀಳಿನಿಂದ ಕೂಡಿದ ಸುಳ್ಳು ವಿಚಾರಕ್ಕೆ ಪ್ರತಿಕ್ರಿಯಿಸುವುದು ವ್ಯರ್ಥ‘ ಎಂದಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾ ದಿನ ನಡೆದ ಸಭೆಯಲ್ಲಿ ಬಿಲ್‌ವಾಲ್‌ ಅವರು ಜಮ್ಮು ಮತ್ತು ಕಾಶ್ಮೀರವನ್ನು ಉಲ್ಲೇಖಿಸಿದ್ದರು. ಅದಕ್ಕೆ ಪ್ರತಿಯಾಗಿ ವಿಶ್ವಸಂಸ್ಥೆಯ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಅವರಿಂದ ಪ್ರತ್ಯುತ್ತರ ಬಂದಿದೆ.

ಮಹಿಳೆಯರ ಸುರಕ್ಷತೆ ಹಾಗೂ ನೆಮ್ಮದಿ ಎಂಬ ವಿಷಯದ ಮೇಲೆ ಬುಧವಾರ ವಿಶ್ವಸಂಸ್ಥೆ ಚರ್ಚೆ ಏರ್ಪಡಿಸಿತ್ತು. ಅದರಲ್ಲಿ ಮಾತನಾಡಿದ ರುಚಿರಾ, ‘ಪಾಕಿಸ್ತಾನ ಪ್ರಸ್ತಾಪಿಸಿದ ವಿಚಾರ ಸತ್ಯವಲ್ಲ. ಇದು ರಾಜಕೀಯ ಪ್ರೇರಿತ‘ ಎಂದರು.

ADVERTISEMENT

‘ನಮ್ಮ ಗಮನ ಇರುವುದು ಧನಾತ್ಮಕ ಯೋಚನೆಯಿಂದ ಮುಂದುವರಿಯಲು, ಹೊರತು ಪ್ರಯೋಜನವಿಲ್ಲದ ವಿಷಯಗಳಲ್ಲಿ ಅಲ್ಲ. ಇಂದು ನಾವು ಮಹಿಳೆಯರಿಗೆ ಪೂರ್ಣ ರಕ್ಷಣೆ ಹಾಗೂ ನೆಮ್ಮದಿ ಒದಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸುವುದರ ಕುರಿತು ಚರ್ಚಿಸಬೇಕಾಗಿದೆ. ವಿಶ್ವಸಂಸ್ಥೆ ಆಯೋಜಿಸಿದ ಈ ವಿಷಯ ಪ್ರಸ್ತುತ ಸಂದರ್ಭಕ್ಕೆ ಸರಿಯಾಗಿದ್ದು ವಿಷಯಕ್ಕೆ ತಕ್ಕಂತೆ ಚರ್ಚಿಸುತ್ತಿದ್ದೇವೆ. ಹೊರತು, ವಿಷಯಾಂತರ ಮಾಡುತ್ತಿಲ್ಲ‘ ಎಂದು ಹೇಳಿದರು.

‘ಕೇಂದ್ರಾಡಳಿತದಲ್ಲಿರುವ ಸಂಪೂರ್ಣ ಜಮ್ಮು–ಕಾಶ್ಮೀರ ಹಾಗೂ ಲಡಾಖ್ ಯಾವತ್ತೂ ಭಾರತದ ಶಾಶ್ವತ ಭಾಗವಾಗಿರಲಿದೆ ಎಂದು ಹಿಂದೆಯೇ ತಿಳಿಸಿದ್ದೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.