ADVERTISEMENT

ತಾಲಿಬಾನ್‌ ಜೊತೆ ಇಂದು ಅಮೆರಿಕ ಒಪ್ಪಂದ: ಮಹತ್ವದ ಘಟನೆಗೆ ಸಾಕ್ಷಿಯಾಗಲಿದೆ ಭಾರತ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 5:23 IST
Last Updated 29 ಫೆಬ್ರುವರಿ 2020, 5:23 IST
   

ನವದೆಹಲಿ: ಅಫ್ಗಾನಿಸ್ತಾನದ ತಾಲಿಬಾನ್‌ ಜೊತೆಗೆ ಅಮೆರಿಕ ಇಂದು ಮಹತ್ವದ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಕತಾರ್‌ನ ದೋಹಾದಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಘಟನೆಗೆ ಭಾರತವೂ ಸಾಕ್ಷಿಯಾಗುತ್ತಿದೆ. ವೀಕ್ಷಕರಾಗಿ ಭಾರತದ ಪ್ರತಿನಿಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

9/11ರ ಭಯೋತ್ಪಾದಕ ದಾಳಿಯ ನಂತರ ಅಮೆರಿಕ ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ನಿಗ್ರಹಕ್ಕಾಗಿ ರಕ್ಷಣಾ ಪಡೆಗಳನ್ನು ನಿಯೋಜಿಸಿತ್ತು. ಇದೀಗ 19 ವರ್ಷಗಳ ನಂತರ ಅಮೆರಿಕ ತಾಲಿಬಾನ್‌ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುತ್ತಿದೆ.

ಅಫ್ಗಾನಿಸ್ತಾನದಲ್ಲಿರುವ ಸಾವಿರ ಸಂಖ್ಯೆಯ ಸೇನಾ ಪಡೆಗಳನ್ನು ಅಮೆರಿಕ ಹಿಂಪಡೆಯಬೇಕು, ತಾಲಿಬಾನಿ ಪಡೆಗಳೊಂದಿಗೆ ಅಫ್ಗಾನಿಸ್ತಾನಸರ್ಕಾರ ಔಪಚಾರಿಕ ಮಾತುಕತೆಗೆ ನಡೆಸಬೇಕು, ರಾಜಕೀಯ ಮತ್ತು ನಾಗರಿಕ ಸಂಸ್ಥೆಗಳು ರಾಷ್ಟ್ರಾದ್ಯಂತ ಶಾಶ್ವತ ಕದನವಿರಾಮ ಘೋಷಿಸುವುದು, ಯುದ್ಧೋತ್ತರ ಅಫ್ಗಾನಿಸ್ತಾನದಲ್ಲಿ ಅಧಿಕಾರ ಹಂಚಿಕೆ ವಿಚಾರಗಳು ಈ ಒಪ್ಪಂದದಲ್ಲಿರುವ ಪ್ರಮುಖಾಂಶಗಳು.

ADVERTISEMENT

2001ರಿಂದ ಅಫ್ಗಾನಿಸ್ತಾನದಲ್ಲಿ ಅಮೆರಿಕದ 2352ರ ಸೈನಿಕರು ಬೀಡು ಬಿಟ್ಟಿದ್ದಾರೆ.

ಅಮೆರಿಕ ಮತ್ತು ತಾಲಿಬಾನ್‌ ಪಡೆಗಳೊಂದಿಗೆ ನಡೆಯುತ್ತಿರುವ ಈ ಒಪ್ಪಂದದಲ್ಲಿ, ಅದರಲ್ಲೂ ತಾಲಿಬಾನ್‌ ಇರುವ ಈ ಒಪ್ಪಂದದ ಸಮಾರಂಭದಲ್ಲಿ ಭಾರತ ಭಾಗವಹಿಸುತ್ತಿರುವುದು ಇದೇ ಮೊದಲು.

ದೋಹಾದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕತಾರ್‌ನ ಭಾರತದ ರಾಯಭಾರಿ ಪಿ ಕುಮಾರನ್‌ ಅವರು ಭಾಗವಹಿಸುತ್ತಿದ್ದಾರೆ.

ತಾಲಿಬಾನಿಗಳೊಂದಿಗೆ ಅಮೆರಿಕ ಮಾಡಿಕೊಳ್ಳುತ್ತಿರುವ ಈ ಒಪ್ಪಂದದ ಬಗ್ಗೆ ಎಲ್ಲರಿಗೂ ಸಂತೋಷವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ‘ ನಾನು ಭಾರತದ ಪ್ರಧಾನಿಯೊಂದಿಗೆ ಇದೇ ವಿಚಾರವಾಗಿ ಮಾತನಾಡಿದೆ. ಈ ಒಪ್ಪಂದ ಏರ್ಪಡಲು ಭಾರತ ಇಷ್ಟಪಡುತ್ತಿದೆ. ನಾವು ಈ ಒಪ್ಪಂದಕ್ಕೆ ಹತ್ತಿರವಿದ್ದೇವೆ. ಎಲ್ಲರಿಗೂ ಖುಷಿ ಇದೆ,’ ಎಂದು ಟ್ರಂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.