ಪ್ರಧಾನಿ ನರೇಂದ್ರ ಮೋದಿ
ಪಿಟಿಐ
ನವದೆಹಲಿ: ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿರುವುದರ ಮಧ್ಯೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಕೀವ್‌ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಉಕ್ರೇನ್ ರಾಷ್ಟ್ರೀಯ ದಿನದ ಅಂಗವಾಗಿ ಆಗಸ್ಟ್ 24ರಂದು ಕೀವ್‌ಗೆ ಭೇಟಿ ನೀಡಲಿದ್ದಾರೆ. ಬಳಿಕ ಪೋಲೆಂಡ್‌ಗೆ ತೆರಳಲಿದ್ದಾರೆ ಎಂದು ವಿವಿಧ ರಾಜತಾಂತ್ರಿಕ ಮೂಲಗಳು ತಿಳಿಸಿರುವುದಾಗಿ ಶನಿವಾರ ವರದಿಯಾಗಿದೆ. ಒಂದುವೇಳೆ ಮೋದಿ ಪೋಲೆಂಡ್‌ಗೆ ತೆರಳಿದರೆ, 4 ದಶಕಗಳ ನಂತರ ಆ ದೇಶಕ್ಕೆ ಭೇಟಿ ನೀಡಿದ ಭಾರತದ ಪ್ರಧಾನಿ ಎನಿಸಲಿದ್ದಾರೆ.
ಮೋದಿ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಕಳೆದ ತಿಂಗಳು ಇಟಲಿಯಲ್ಲಿ ನಡೆದ ಜಿ7 ಶೃಂಗದ ವೇಳೆ ಮಾತುಕತೆ ನಡೆಸಿದ್ದರು.
ಮೋದಿ ಅವರು ಕೀವ್‌ಗೆ ಭೇಟಿ ನೀಡುವುದನ್ನು ಭಾರತ ಮತ್ತು ಉಕ್ರೇನ್ ಎದುರು ನೋಡುತ್ತಿವೆ. ಆದರೆ, ಭೇಟಿಗೆ ಸಂಬಂಧಿಸಿದಂತೆ ಭಾರಿ ಸಿದ್ಧತೆಗಳನ್ನು ಕೈಗೊಳ್ಳಬೇಕಿರುವುದರಿಂದ ಈ ವಿಚಾರ ಇನ್ನೂ ಅಂತಿಮವಾಗಿಲ್ಲ ಎಂದು ಮೂಲಗಳು ಹೇಳಿವೆ.
ಮೋದಿ ಅವರ ದ್ವಿರಾಷ್ಟ್ರ ಪ್ರವಾಸವು ಆಗಸ್ಟ್ 23–24ರಂದು ಆರಂಭವಾಗಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಭಾರತ ಅಥವಾ ಉಕ್ರೇನ್ ಅಧಿಕೃತ ಹೇಳಿಕೆ ನೀಡಿಲ್ಲ.
'ಭಾರತದ ಸಹಕಾರ ಮುಂದುವರಿಯಲಿದೆ'
ಜೂನ್ 14ರಂದು ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿದ್ದ ಮೋದಿ, ರಷ್ಯಾ ಹಾಗೂ ಉಕ್ರೇನ್ ನಡುವಣ ಸಂಘರ್ಷವನ್ನು 'ರಾಜತಾಂತ್ರಕ ಮಾತುಕತೆ' ಮೂಲಕ ಶಾಂತಿಯುತವಾಗಿ ಪರಿಹರಿಸಲು ಸಾಧ್ಯವಿರುವ ಎಲ್ಲ ಸಹಕಾರವನ್ನು ಭಾರತ ಮುಂದುವರಿಸಲಿದೆ ಎಂದು ತಿಳಿಸಿದ್ದರು.
ಇದೇ ವೇಳೆ ಝೆಲೆನ್‌ಸ್ಕಿ ಅವರು ಕೀವ್‌ಗೆ ಭೇಟಿ ನೀಡುವಂತೆ ಮೋದಿ ಅವರನ್ನು ಆಹ್ವಾನಿಸಿದ್ದರು.
ರಷ್ಯಾ ಭೇಟಿಗೆ ಟೀಕೆ
ಮೋದಿ ಅವರು ಜುಲೈ 8–9ರಂದು ರಷ್ಯಾಗೆ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದನ್ನು ಝೆಲೆನ್‌ಸ್ಕಿ ಟೀಕಿಸಿದ್ದರು. ಅಮೆರಿಕ ಹಾಗೂ ಹಲವು ಪಾಶ್ಚಾತ್ಯ ರಾಷ್ಟ್ರಗಳೂ ಅಸಮಾಧಾನ ವ್ಯಕ್ತಪಡಿಸಿದ್ದವು.
ಆ ಭೇಟಿ ವೇಳೆ ಮೋದಿ ಅವರು, ಉಕ್ರೇನ್ ಜೊತೆಗಿನ ಸಂಘರ್ಷಕ್ಕೆ ಯುದ್ಧಭೂಮಿಯಲ್ಲಿ ಪರಿಹಾರ ಸಾಧ್ಯವಿಲ್ಲ. ಬಾಂಬ್, ಬಂದೂಕಿನ ಸದ್ದಿನ ನಡುವೆ ಶಾಂತಿ ಮಾತಕತೆ ಯಶಸ್ವಿಯಾಗದು ಎಂದು ಪ್ರತಿಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.