ADVERTISEMENT

ಮೋದಿ ನಾಯಕತ್ವದಲ್ಲಿ ಪಾಕ್‌ಗೆ ತಕ್ಕ ಪ್ರತ್ಯುತ್ತರ: ಅಮೆರಿಕ ಬೇಹುಗಾರಿಕೆ ವರದಿ

ಅಮೆರಿಕ ರಾಷ್ಟ್ರೀಯ ಬೇಹುಗಾರಿಕೆ ನಿರ್ದೇಶಕ ಕಚೇರಿ ವರದಿಯಲ್ಲಿ ಉಲ್ಲೇಖ

ಪಿಟಿಐ
Published 14 ಏಪ್ರಿಲ್ 2021, 6:15 IST
Last Updated 14 ಏಪ್ರಿಲ್ 2021, 6:15 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ವಾಷಿಂಗ್ಟನ್‌: ಪಾಕಿಸ್ತಾನದ ಪ್ರಚೋದನಾಕಾರಿ ದಾಳಿಗಳಿಗೆ ಭಾರತ ಈಗ ಹಿಂದಿಗಿಂತಲೂ ಮಿಲಿಟರಿ ಪಡೆಯೊಂದಿಗೆ ಬಲವಾದ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಬೇಹುಗಾರಿಕೆ ವರದಿ ತಿಳಿಸಿದೆ.

ರಾಷ್ಟ್ರೀಯ ಬೇಹುಗಾರಿಕೆ ನಿರ್ದೇಶಕ ಕಚೇರಿಯ (ಒಡಿಎನ್‌ಐ) ವಾರ್ಷಿಕ ಬೆದರಿಕೆ ಪರಿಶೀಲನಾ ವರದಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಈ ವರದಿಯನ್ನು ಸಂಸತ್‌ಗೆ ಸಲ್ಲಿಸಲಾಗಿದೆ.

ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಈಗ ಹಿಂದಿಗಿಂತಲೂ ಪಾಕಿಸ್ತಾನದ ಪ್ರಚೋದನಾ ದಾಳಿಗಳಿಗೆ ತಕ್ಕ ತಿರುಗೇಟು ನೀಡಲಿದೆ. ಪ್ರತಿ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ವರದಿ ತಿಳಿಸಿದೆ.

ADVERTISEMENT

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಕಡಿಮೆ. ಆದರೆ, ಉಭಯ ದೇಶಗಳ ನಡುವೆ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದ ಜತೆ ಸಂಬಂಧ ಬೆಳೆಸಲು ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣ ಮೊದಲು ಸೃಷ್ಟಿಯಾಗಬೇಕು. ಇಂತಹ ವಾತಾವಾರಣ ಕಲ್ಪಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಭಾರತ ಹೇಳಿದೆ.

ಅಫ್ಗಾನಿಸ್ತಾನ, ಇರಾಕ್‌, ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳು ಅಮೆರಿಕದ ಪಡೆಗಳ ಮೇಲೆ ಪರಿಣಾಮ ಬೀರಿವೆ. ಆದರೆ, ಅಣ್ವಸ್ತ್ರ ಹೊಂದಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಬಿಕ್ಕಟ್ಟು ಜಗತ್ತಿಗೆ ಆತಂಕ ಮೂಡಿಸಿದೆ ಎಂದು ತಿಳಿಸಲಾಗಿದೆ.

ಮೈತ್ರಿ ಪಡೆಗಳನ್ನು ವಾಪಸ್‌ ಕರೆಸಿಕೊಂಡರೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಮೇಲುಗೈ ಸಾಧಿಸಬಹುದು. ತಾಲಿಬಾನ್‌ ನಿಯಂತ್ರಿಸಲು ಅಫ್ಗಾನಿಸ್ತಾನ ಸರ್ಕಾರ ತೀವ್ರ ಗತಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ. ಅಫ್ಗಾನಿಸ್ತಾನ ಸರ್ಕಾರಕ್ಕೆ ಹಿನ್ನಡೆಯಾಗಬಹುದು. ಆಗ ಜಯ ಸಾಧಿಸುವ ವಿಶ್ವಾಸ ತಾಲಿಬಾನ್‌ ಹೊಂದಲಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.