ADVERTISEMENT

ಭಾರತದೊಂದಿಗೆ ವ್ಯಾಪಾರ ಒಪ್ಪಂದ: ಅಮೆರಿಕದ ಕೃಷಿ ಉತ್ಪನ್ನಕ್ಕೆ ಸುಂಕ ಕಡಿತ ?

ಪಿಟಿಐ
Published 10 ಫೆಬ್ರುವರಿ 2026, 15:40 IST
Last Updated 10 ಫೆಬ್ರುವರಿ 2026, 15:40 IST
.
.   

ವಾಷಿಂಗ್ಟನ್‌/ನವದೆಹಲಿ: ‘ಕೆಲವು ದ್ವಿದಳ ಧಾನ್ಯಗಳು ಸೇರಿದಂತೆ ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಿಶಾಲ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತ ಮಾಡಲು ಅಥವಾ ಶೂನ್ಯಕ್ಕಿಳಿಸಲು ಭಾರತ ಮುಂದಾಗಿದೆ’ ಎಂದು ಶ್ವೇತಭವನ ಸೋಮವಾರ ಬಿಡುಗಡೆ ಮಾಡಿರುವ ಫ್ಯಾಕ್ಟ್‌ ಶೀಟ್‌ ವರದಿ ಹೇಳಿದೆ. 

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (ಬಿಟಿಎ) ರೂಪುರೇಷೆ, ನಿಬಂಧನೆಗಳನ್ನು ಒಳಗೊಂಡ ಫ್ಯಾಕ್ಟ್‌ ಶೀಟ್‌ಅನ್ನು, ‘ಮುಂದಿನ ಸಮೃದ್ಧ ಹಾದಿ’ ಎಂದೇ ಬಣ್ಣಿಸಲಾಗಿದೆ. ಇದರಲ್ಲಿರುವ ಅಂಶಗಳು ಯಥಾವತ್ ಜಾರಿಗೊಂಡರೆ, ಅದು ಭಾರತ ಕೃಷಿ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. 

ಈಗಾಗಲೇ ಭಾರತ–ಅಮೆರಿಕ ನಡುವೆ ಫೆಬ್ರುವರಿ 6ರಂದು ಮಧ್ಯಂತರ ಒಪ್ಪಂದದ ಚೌಕಟ್ಟನ್ನು ರೂಪಿಸಲಾಗಿದೆ. ಇದಾದ ಮೂರು ದಿನಗಳಲ್ಲೇ ಫ್ಯಾಕ್ಟ್‌ ಶೀಟ್‌ ಬಿಡುಗಡೆಗೊಂಡಿದೆ. ಕೃಷಿ, ಆಹಾರ ಉತ್ಪನ್ನಗಳ ಸುಂಕ ಕಡಿತಕ್ಕೆ ಸಂಬಂಧಿಸಿದಂತೆ ಫೆ.6ರಂದು ಉಭಯ ದೇಶಗಳು ನೀಡಿದ ಹೇಳಿಕೆಗೂ, ಫ್ಯಾಕ್ಟ್‌ ಶೀಟ್‌ನಲ್ಲಿರುವ ಅಂಶಗಳಿಗೂ ವ್ಯತ್ಯಾಸ ಕಂಡುಬಂದಿದೆ.

ADVERTISEMENT

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ವೇಳೆ ಆಹಾರ ಮತ್ತು ಕೃಷಿ ಕ್ಷೇತ್ರಗಳ ಹಿತಾಸಕ್ತಿ ಕಾಪಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್‌ ಗೋಯಲ್‌ ಸಂಸತ್‌ಗೆ ಭರವಸೆ ನೀಡಿದ್ದರು. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್‌ ಚೌಹಾಣ್‌ ಕೂಡ, ‘ಗೋಧಿ, ಜೋಳ, ಅಕ್ಕಿ, ರಾಗಿ, ಆಲೂಗಡ್ಡೆ, ಈರುಳ್ಳಿ, ಬಟಾಣಿ, ಬೀನ್ಸ್, ಸೌತೆಕಾಯಿ, ಅಣಬೆ, ದ್ವಿದಳ ಧಾನ್ಯಗಳು ಅಮೆರಿಕದಿಂದ ಭಾರತಕ್ಕೆ ಬರುವುದಿಲ್ಲ’ ಎಂದು ಹೇಳಿದ್ದರು. 

ಆದರೆ, ಫ್ಯಾಕ್ಟ್‌ ಶೀಟ್‌ನಲ್ಲಿ ಮುಖ್ಯವಾಗಿ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಮತ್ತು ಸುಂಕ ಕಡಿತಕ್ಕೆ ಒಳಗಾಗುವ ಸರಕುಗಳಲ್ಲಿ ‘ಮಸೂರ್‌ ಬೇಳೆ’ಯನ್ನು  ಉಲ್ಲೇಖಿಸಲಾಗಿದೆ. ಸದ್ಯ ಮಸೂರ್‌ ಬೇಳೆಗೆ ಶೇ 10ರಷ್ಟು ಸುಂಕ ಇದೆ. ಇದರ ಜತೆಗೆ  ‘ಕೆಂಪು ಜೋಳ’ವನ್ನು ಮೇವು ಎಂದು ಮೊದಲು ಹೇಳಲಾಗಿತ್ತು. ಫ್ಯಾಕ್ಟ್‌ ಶೀಟ್‌ನಲ್ಲಿ ಕೆಂಪು ಜೋಳವನ್ನೂ ಸುಂಕ ಕಡಿತಕ್ಕೆ ಒಳಗಾಗುವ ಸರಕುಗಳ ಪಟ್ಟಿಗೆ ಸೇರಿಸಲಾಗಿದೆ. 

ಅಮೆರಿಕದ ಕೈಗಾರಿಕಾ ಸರಕುಗಳ ಮೇಲಿನ ತೆರಿಗೆಯನ್ನೂ ಭಾರತ ಕಡಿತ ಮಾಡಬಹುದು ಎಂದು ಫ್ಯಾಕ್ಟ್‌ ಶೀಟ್‌ನಲ್ಲಿ ಹೇಳಲಾಗಿದೆ.  

‘ಬಿಟಿಎ’ ಅಂತಿಮಗೊಂಡ ನಂತರ ಭಾರತದ ಕೆಲವು ಸರಕುಗಳು ಸುಂಕ ರಹಿತವಾಗಿ ಅಮೆರಿಕದ ಮಾರುಕಟ್ಟೆ ಹಾಗೂ ಅಮೆರಿಕದ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. 

ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ಮುನ್ನ ‘ಹೂಡಿಕೆ, ಸೇವೆ, ಕಾರ್ಮಿಕ ವಲಯ, ತಾಂತ್ರಿಕ ಅಡೆತಡೆ, ಭೌತಿಕ ಆಸ್ತಿ, ಕಸ್ಟಮ್ಸ್‌, ಸರಕುಗಳ ಸಂಗ್ರಹ, ವ್ಯಾಪಾರ ಅಕ್ರಮ ತಡೆ ಸೇರಿದಂತೆ ಕೆಲವು ವಿಷಯಗಳು ಇತ್ಯರ್ಥವಾಗಬೇಕಿವೆ. ಆ ನಿಟ್ಟಿನಲ್ಲಿ ಉಭಯ ದೇಶಗಳು ಮಾತುಕತೆಯಲ್ಲಿ ತೊಡಗಿದ್ದು, ಕೆಲವೇ ವಾರಗಳಲ್ಲಿ ಒಪ್ಪಂದ ಅಂತಿಮಗೊಳ್ಳಲಿದೆ. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಉಭಯ ದೇಶಗಳಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನಕಾರಿಯಾಗಲಿದೆ’ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. 

ಸುಂಕ ಇಳಿಕೆ ಸಾಧ್ಯತೆ

ಧಾನ್ಯಗಳು, ಬೇಳೆಕಾಳುಗಳು, ಕೆಂಪು ಜೋಳ, ಡ್ರೈಫ್ರೂಟ್‌ಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣು, ದ್ವಿದಳ ಧಾನ್ಯಗಳು, ಸೋಯಾಬೀನ್‌ ಎಣ್ಣೆ, ವೈನ್ ಮತ್ತು ಮದ್ಯ

ಭಾರತದ ಒಪ್ಪಿಗೆ 

ಅಮೆರಿಕದಿಂದ ಇಂಧನ, ಮಾಹಿತಿ ತಂತ್ರಜ್ಞಾನ, ಸಂವಹನ, ಕಲ್ಲಿದ್ದಲು, ಕೃಷಿ ಮತ್ತು ಇತರೆ ವಲಯಗಳ ಉತ್ಪನ್ನಗಳು ಸೇರಿ ಒಟ್ಟು 500 ಬಿಲಿಯನ್‌ ಡಾಲರ್‌ಗಿಂತ (ಸರಿಸುಮಾರು ₹45.28 ಲಕ್ಷ ಕೋಟಿ) ಹೆಚ್ಚಿನ ಮೊತ್ತದ ಸರಕಗಳನ್ನು ಖರೀದಿಸಲು ಭಾರತ ಒಪ್ಪಿಕೊಂಡಿದೆ. 

ಅಮೆರಿಕದ ಆದ್ಯತೆ 

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಒಪ್ಪಂದದ ಮೂಲಕ ಅಮೆರಿಕದ ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತೆ ರಕ್ಷಿಸಲು ಮತ್ತು ಅಲ್ಲಿನ ರಫ್ತುದಾರರಿಗೆ ಮಾರುಕಟ್ಟೆ ಪ್ರವೇಶಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸುಂಕ ಮತ್ತು ಸುಂಕ ರಹಿತ ಸರಕುಗಳ ನಡುವಿನ ವ್ಯಾಪಾರ ಅಡೆತಡೆ ನಿವಾರಿಸಲು ಯತ್ನಿಸುತ್ತಿದ್ದಾರೆ.

ಭಾರತದ ರಕ್ಷಣಾತ್ಮಕ ಸುಂಕ ನೀತಿ

ಭಾರತವು ಅಮೆರಿಕದ ಮೇಲೆ ಗರಿಷ್ಠ ಸುಂಕ ದರವನ್ನೇ ಕಾಯ್ದುಕೊಂಡಿದೆ. ಕೃಷಿ ಉತ್ಪನ್ನಗಳ ಮೇಲೆ ಶೇ 37ರಷ್ಟು ಕೆಲವು ವಾಹನಗಳಿಗೆ ಶೇ 100ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಭಾರತವು ಹೆಚ್ಚು ರಕ್ಷಣಾತ್ಮಕವಾದ ಸುಂಕ ವಿಧಿಸುವ ಇತಿಹಾಸವನ್ನು ಹೊಂದಿದೆ. ಇದರಿಂದ ಅಮೆರಿಕದಿಂದ ಭಾರತಕ್ಕೆ ಹಲವು ಸರಕುಗಳ ರಫ್ತು ನಿಷೇಧಿಸಲಾಗಿದೆ ಎಂದು ಫ್ಯಾಕ್ಟ್‌ ಶೀಟ್‌ ಹೇಳಿದೆ.   ಅಂತಿಮ ಒಪ್ಪಂದದ ಮೂಲಕ ಭಾರತ ಮತ್ತು ಅಮೆರಿಕದ ಮುಂದೆ ಸ್ಪಷ್ಟವಾದ ಮಾರ್ಗ ತೆರೆದುಕೊಳ್ಳುತ್ತದೆ. ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿರುವ ಭಾರತದೊಂದಿಗೆ ಸಮತೋಲಿತ ಪರಸ್ಪರ ಸಹಕಾರದ ವ್ಯಾಪಾರ ಒಪ್ಪಂದ ಸಾಕಾರಗೊಳ್ಳಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಮರ್ಪಣೆ ಕಾರಣ ಎಂದೂ ಶ್ವೇತಭವನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.