ADVERTISEMENT

ವಿಶ್ವದಲ್ಲಿ ಶಾಂತಿ ಸ್ಥಾಪನೆ, ಸುರಕ್ಷತೆಗೆ ಭಾರತ ಬದ್ಧ: ಭಾರತೀಯ ರಾಯಭಾರಿ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಸೇರಿ ಐದು ರಾಷ್ಟ್ರಗಳ ಧ್ವಜ ಸ್ಥಾಪನೆ

ಪಿಟಿಐ
Published 5 ಜನವರಿ 2021, 6:37 IST
Last Updated 5 ಜನವರಿ 2021, 6:37 IST
ವಿಶ್ವಸಂಸ್ಥೆ ಲಾಂಛನ
ವಿಶ್ವಸಂಸ್ಥೆ ಲಾಂಛನ   

ವಿಶ್ವಸಂಸ್ಥೆ: ‘ಭಯೋತ್ಪಾದನೆ ಸೇರಿದಂತೆ ಮಾನವೀಯತೆಯ ವಿರೋಧಿಗಳ ವಿರುದ್ಧ ಭಾರತ ಎಂದಿಗೂ ಧ್ವನಿಯಾಗಿರಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನ್ನ ಅಧಿಕಾರವಧಿಯಲ್ಲಿ ವಿಶ್ವದಲ್ಲಿ ಶಾಂತಿ ಸ್ಥಾಪನೆ, ಸುರಕ್ಷತೆಗೆ ಒತ್ತು ನೀಡಲಿದೆ’ ಎಂದು ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾರುವ ಅವರು, ಭದ್ರತಾ ಮಂಡಳಿಯು ಆಯೋಜಿಸಿದ್ದ ಧ್ವಜಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಸೇರಿದಂತೆ ಐದುಶಾಶ್ವತಯೇತರ ನೂತನ ಸದಸ್ಯ ರಾಷ್ಟ್ರಗಳ ಧ್ವಜವನ್ನು ಕಾರ್ಯಕ್ರಮದಲ್ಲಿ ಸ್ಥಾಪಿಸಲಾಯಿತು. ನಾರ್ವೆ, ಕೀನ್ಯಾ, ಐರ್ಲೆಂಡ್, ಮೆಕ್ಸಿಕೊ ಇತರ ನಾಲ್ಕು ರಾಷ್ಟ್ರಗಳು.

ಶಾಶ್ವತಯೇತರ ಸದಸ್ಯ ರಾಷ್ಟ್ರವಾಗಿ 2021–22ರಲ್ಲಿ ಭಾರತದ ಅಧಿಕಾರವಧಿ ಜನವರಿ 1ರಂದು ಆರಂಭವಾಗಿದ. 15 ರಾಷ್ಟ್ರಗಳು ಈ ಮಂಡಳಿ ಸದಸ್ಯ ರಾಷ್ಟ್ರಗಳಾಗಿವೆ.

ADVERTISEMENT

ಭಾರತದ ತ್ರಿವರ್ಣ ಧ್ವಜವನ್ನು ಸ್ಥಾಪಿಸಿದ ತಿರುಮೂರ್ತಿ ಅವರು, ‘ಭಾರತ ಎಂಟನೇ ಬಾರಿಗೆ ಭದ್ರತಾ ಮಂಡಳಿಯಲ್ಲಿ ಈ ರೀತಿ ಸದಸ್ಯತ್ವ ಪಡೆದಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿ ಧ್ವಜಸ್ಥಾಪನೆಗೆ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ಸಂಗತಿ’ ಎಂದರು.

ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಭಾರತವು ಭದ್ರತಾ ಮಂಡಳಿಗೆ ಸೇರಿದೆ. ಬಹುಪಕ್ಷೀಯ ಸುಧಾರಣೆ, ನೆಲದ ಕಾನೂನಿಗೆ ಗೌರವ, ಮುಕ್ತ ಮತ್ತು ನ್ಯಾಯಸಮ್ಮತ ಅಂತರರಾಷ್ಟ್ರೀಯ ವ್ಯವಸ್ಥೆ, ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂಗೆ ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ ಎಂದರು.

ವಿಶ್ವಸಂಸ್ಥೆಯಲ್ಲಿ ಭಾರತವು ತನ್ನ ಅಧಿಕಾರವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿಸ್ಥಾಪನೆಗೆ ಆದ್ಯತೆ ನೀಡಲಿದೆ. ಅಭಿವೃದ್ಧಿ ಪಥದಲ್ಲಿರುವ ಜಗತ್ತಿನ ಧ್ವನಿಯಾಗಿ ಭಾರತ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.

ಭಾರತವು ಯುಎನ್‌ಎಸ್‌ಸಿ ಅಧ್ಯಕ್ಷ ಸ್ಥಾನದಲ್ಲಿ ಆಗಸ್ಟ್‌ 2021ರಲ್ಲಿ ಕಾರ್ಯನಿರ್ವಹಿಸಲಿದ್ದು, ಮತ್ತೆ 2022ರಲ್ಲಿಯೂ ಒಂದು ತಿಂಗಳು ಈ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿದೆ. ಇಂಗ್ಲಿಷ್‌ ಅಕ್ಷರಮಾಲೆಯ ಅನುಸಾರ ಪ್ರತಿಯೊಂದು ಸದಸ್ಯ ರಾಷ್ಟ್ರಗಳು ತಲಾ ಒಂದು ತಿಂಗಳು ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಲಿವೆ.

ಧ್ವಜಸ್ಥಾಪನೆಯ ಸಂಪ್ರದಾಯವನ್ನು 2018ರಲ್ಲಿ ಕಜಕಸ್ತಾನ ಆರಂಭಿಸಿತ್ತು. ಇದಕ್ಕೆ ಎಲ್ಲ 15 ಸದಸ್ಯ ರಾಷ್ಟ್ರಗಳು ಅನುಮೋದನೆ ನೀಡಿದ್ದು, ಅಂದಿನಿಂದ ವಾರ್ಷಿಕ ಕಾರ್ಯಕ್ರಮವಾಗಿ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.