ADVERTISEMENT

ಫ್ಲಾರಿಡಾ ಕಟ್ಟಡ ಕುಸಿತ: ಭಾರತೀಯ ಅಮೆರಿಕನ್ ದಂಪತಿ, ಮಗು ನಾಪತ್ತೆ

ಪಿಟಿಐ
Published 29 ಜೂನ್ 2021, 6:01 IST
Last Updated 29 ಜೂನ್ 2021, 6:01 IST
ಮಿಯಾಮಿ ಸಮೀಪ ಸಮುದ್ರ ತೀರ ಪ್ರದೇಶದಲ್ಲಿರುವ 12 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿರುವುದು (ಎಎಫ್‌ಪಿ ಚಿತ್ರ)
ಮಿಯಾಮಿ ಸಮೀಪ ಸಮುದ್ರ ತೀರ ಪ್ರದೇಶದಲ್ಲಿರುವ 12 ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿರುವುದು (ಎಎಫ್‌ಪಿ ಚಿತ್ರ)   

ಹ್ಯೂಸ್ಟನ್: ಫ್ಲಾರಿಡಾದ ಮಿಯಾಮಿ ಸಮೀಪ 12 ಅಂತಸ್ತಿನ ಕಟ್ಟಡದ ಒಂದು ಭಾಗ ಇತ್ತೀಚೆಗೆ ಕುಸಿದಿದ್ದು 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಭಾರತೀಯ ಅಮೆರಿಕನ್ ದಂಪತಿ ಮತ್ತು ಮಗು ಕೂಡ ಇರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಸಮುದ್ರ ತೀರ ಪ್ರದೇಶದಲ್ಲಿರುವ ಕಟ್ಟಡದ ಭಾಗ ಕುಸಿದುಬಿದ್ದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿತ್ತು. ಕನಿಷ್ಠ 9 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಶಾಲ್ ಪಟೇಲ್ (42), ಅವರ ಪತ್ನಿ ಭಾವನಾ ಪಟೇಲ್ (38) ಹಾಗೂ ಇವರ ಪುತ್ರಿ ಐಶಾನಿ ಪಟೇಲ್ ಸಹ ನಾಪತ್ತೆಯಾದವರಲ್ಲಿ ಸೇರಿರುವುದಾಗಿ ಭಾವಿಸಲಾಗಿದೆ. ಭಾವನಾ ಪೇಟೇಲ್ ನಾಲ್ಕು ತಿಂಗಣ ಗರ್ಭಿಣಿ ಎಂದು ದಂಪತಿಯ ಸೋದರ ಸೊಸೆ ಸರಿನಾ ಪಟೇಲ್‌ ‘ಸಿಎನ್‌ಎನ್‌’ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

‘ಫಾದರ್ಸ್ ಡೇ’ ದಿನ ದೂರವಾಣಿ ಮೂಲಕ ಕುಟುಂಬದವರೊಂದಿಗೆ ಮಾತನಾಡಿದ್ದೆ. ಅವರು ತಮ್ಮ ಮಗಳನ್ನು ನೋಡಲು ಬರುವಂತೆ ನನ್ನಲ್ಲಿ ಕೇಳಿಕೊಂಡಿದ್ದರು. ಕೋವಿಡ್ ಸಾಂಕ್ರಾಮಿಕದಿಂದಾಗಿ ಅವರ ಮಗಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲಿಗೆ ತೆರಳಲು ವಿಮಾನ ಟಿಕೆಟ್ ಕಾಯ್ದಿರಿಸಿರುವುದಾಗಿ ಹೇಳಲು ಕರೆ ಮಾಡಿದ್ದೆ’ ಎಂದು ಸರಿನಾ ಪಟೇಲ್‌ ಹೇಳಿದ್ದಾರೆ.

ಕಟ್ಟಡ ಕುಸಿದಾಗ ಅವರು ಮನೆಯಲ್ಲಿದ್ದರು. ನಾವು ಹಲವು ಬಾರಿ ಅವರಿಗೆ ಕರೆ ಮಾಡಲು ಯತ್ನಿಸಿದ್ದೆವು. ಆದರೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಸಂದೇಶಗಳಿಗೂ ಉತ್ತರ ಬಂದಿಲ್ಲ. ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದೂ ಸರಿನಾ ಪಟೇಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.