ADVERTISEMENT

ಮನೆಯಲ್ಲಿ ಅಮಿತಾಭ್ ಬಚ್ಚನ್ ಪ್ರತಿಮೆ ಸ್ಥಾಪಿಸಿದ ಭಾರತ ಮೂಲದ ಅಮೆರಿಕ ಕುಟುಂಬ

ಪಿಟಿಐ
Published 29 ಆಗಸ್ಟ್ 2022, 12:33 IST
Last Updated 29 ಆಗಸ್ಟ್ 2022, 12:33 IST
ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್‌ ಬಚ್ಚನ್‌
ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್‌ ಬಚ್ಚನ್‌   

ವಾಷಿಂಗ್ಟನ್: ನ್ಯೂಜೆರ್ಸಿಯ ಎಡಿಸನ್‌ ಸಿಟಿಯಲ್ಲಿರುವ ಭಾರತ ಮೂಲದ ಅಮೆರಿಕ ಕುಟುಂಬವೊಂದು ತಮ್ಮ ಮನೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್‌ ಬಚ್ಚನ್‌ ಅವರ ಪ್ರತಿಮೆಯನ್ನು ಸ್ಥಾಪಿಸಿದೆ.

ಭಾರತ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿರುವ ಎಡಿಸನ್‌ನಲ್ಲಿರುವರಿಂಕು ಹಾಗೂ ಗೋಪಿ ಸೇಥ್‌ ದಂಪತಿ ತಮ್ಮ ಮನೆಯಲ್ಲಿ ಬಚ್ಚನ್‌ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಸ್ಥಳೀಯ ನಾಯಕ ಅಲ್ಬರ್ಟ್‌ ಜಸಾನಿ ಎನ್ನುವವರು ಔಪಚಾರಿಕವಾಗಿ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಈ ವೇಳೆ 600ಕ್ಕೂ ಹೆಚ್ಚು ಜನರು ಭಾಗವಹಿಸಿ, ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.

ಪ್ರತಿಮೆಯನ್ನು ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.

ADVERTISEMENT

ಇಂಟರ್ನೆಟ್‌ ಭದ್ರತಾ ಎಂಜಿನಿಯರ್‌ ಆಗಿರುವಗೋಪಿ ಸೇಥ್‌,ಪೂರ್ವ ಗುಜರಾತ್‌ನ ದಾಹೋದ್‌ನಿಂದ 1990ರಲ್ಲಿ ಯುಎಸ್‌ಗೆ ಆಗಮಿಸಿದ್ದಾರೆ. ಅವರು ಪ್ರತಿಮೆ ಸ್ಥಾಪನೆ ಕುರಿತು ಮಾತನಾಡಿದ್ದು, 'ನನಗೆ ಮತ್ತು ನನ್ನ ಪತ್ನಿಯ ಪಾಲಿಗೆ ಅಮಿತಾಭ್‌ ಬಚ್ಚನ್‌ ದೇವರಿಗಿಂತ ಕಡಿಮೆಯೇನಲ್ಲ' ಎಂದು ಹೇಳಿಕೊಂಡಿದ್ದಾರೆ.

ಮುಂದುವರಿದು,'ಅವರು ತೆರೆ ಮೇಲೆ ಕಾಣಿಸಿಕೊಳ್ಳುವುದಷ್ಟೇ ಅಲ್ಲ. ನಿಜ ಜೀವನದಲ್ಲಿಯೂ ನನಗೆ ಸ್ಫೂರ್ತಿಯಾಗಿದ್ದಾರೆ. ಅವರು ತಮ್ಮನ್ನು ತಾವು ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವುದು, ಸಂವಹನ ನಡೆಸುವುದು ಎಲ್ಲವೂ ನಿಮಗೂ ತಿಳಿದಿರುವ ವಿಚಾರ. ‌ತುಂಬಾಸರಳವಾಗಿರುವ ಅಮಿತಾಭ್‌, ಅಭಿಮಾನಿಗಳ ಬಗ್ಗೆಯೂ ಕಾಳಜಿ ಹೊಂದಿದ್ದಾರೆ. ಅವರು ಬೇರೆ ಸ್ಟಾರ್‌ ನಟರಂತಲ್ಲ. ಹೀಗಾಗಿ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿದೆ' ಎಂದಿದ್ದಾರೆ.

ಈ (ಪ್ರತಿಮೆ) ವಿಷಯ 79 ವರ್ಷದ ಅಮಿತಾಭ್‌ ಅವರಿಗೂ ಗೊತ್ತಿದೆ ಎಂದಿರುವ ಸೇಥ್‌,ವಿಚಾರ ತಿಳಿಸಿದಾಗ ಅಮಿತಾಭ್‌ ಅವರು ಇಂತಹ ಸತ್ಕಾರಕ್ಕೆ ತಾವು ಅರ್ಹರಲ್ಲ ಎಂದು ಹೇಳಿದ್ದರು. ಆದಾಗ್ಯೂ ನಾವು ಪ್ರತಿಮೆ ಸ್ಥಾಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅಮಿತಾಭ್‌ ಅವರುಕಿರುತೆರೆಯಲ್ಲಿ ನಡೆಸಿಕೊಡುವ 'ಕೌನ್‌ ಬನೆಗಾಕರೋಡ್‌'ಪತಿ ಕಾರ್ಯಕ್ರಮದಲ್ಲಿ ಕುಳಿತಿರುವ ಮಾದರಿಯಲ್ಲಿ ಪ್ರತಿಮೆ ಇದೆ. ಇದನ್ನು ರಾಜಸ್ಥಾನದಲ್ಲಿ ವಿನ್ಯಾಸಗೊಳಿಸಿ ಬಳಿಕ ಯುಎಸ್‌ಗೆ ತೆಗೆದುಕೊಂಡು ಬರಲಾಗಿದೆ. ಇದಕ್ಕಾಗಿ ಅಂದಾಜು ₹ 60 ಲಕ್ಷ ವೆಚ್ಚವಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ನ್ಯೂ ಜೆರ್ಸಿಯಲ್ಲಿ 1991ರಲ್ಲಿ ನವರಾತ್ರಿ ಆಚರಣೆ ವೇಳೆಅಮಿತಾಭ್‌ ಅವರನ್ನುಭೇಟಿಯಾಗಿರುವ ಸೇಥ್‌, ಆಗಿನಿಂದಲೂ ಸ್ಟಾರ್‌ ನಟನ ಅಭಿಮಾನಿಯಾಗಿದ್ದಾರೆ. ಅಷ್ಟಲ್ಲದೆ, ಜಾಗತಿಕವಾಗಿ ಅಮಿತಾಭ್‌ ಅಭಿಮಾನಿಗಳನ್ನು ಸಂಘಟಿಸುವ ಸಲುವಾಗಿ ಕಳೆದ ಮೂರು ದಶಕಗಳಿಂದ 'ಬಿಗ್ ಬಿ ಎಕ್ಸ್‌ಟೆಂಡೆಡ್ ಫ್ಯಾಮಿಲಿ' ವೆಬ್‌ಸೈಟ್ www.BigBEFamily.com ಅನ್ನು ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.