ADVERTISEMENT

ಚೀನಾದ ಆಕ್ರಮಣ, ದೌರ್ಜನ್ಯದ ವಿರುದ್ಧ ಭಾರತೀಯ ಅಮೆರಿಕನ್ನರಿಂದ ಪ್ರತಿಭಟನೆ

ಪಿಟಿಐ
Published 10 ಆಗಸ್ಟ್ 2020, 6:06 IST
Last Updated 10 ಆಗಸ್ಟ್ 2020, 6:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತದ ವಿರುದ್ಧ ಚೀನಾದ ಆಕ್ರಮಣಕಾರಿ ವರ್ತನೆ ಹಾಗೂಉಯಿಘರ್ ಅಲ್ಪಸಂಖ್ಯಾತ ಸಮುದಾಯದ ಮಾನವ ಹಕ್ಕುಗಳ ಉಲ್ಲಂಘನೆ ಖಂಡಿಸಿ ಭಾರತೀಯ ಮೂಲದ ಅಮೆರಿಕನ್ನರು ಭಾನುವಾರ ಪ್ರತಿಭಟನೆ ನಡೆಸಿದರು.

ವಾಷಿಂಗ್ಟನ್‌ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಬಂದ ಪ್ರತಿಭಟನಾಕಾರರು ಇಲ್ಲಿನ ನ್ಯಾಷನಲ್‌ ಮಾಲ್‌ ಮುಂಭಾಗದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್‌ ಧರಿಸಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಚೀನಾ ವಿರೋಧಿ ಫಲಕಗಳನ್ನು ಹಿಡಿದು ಚೀನಾ ಕಮ್ಯೂನಿಸ್ಟ್‌ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

‘ಜಗತ್ತು ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಚೀನಾ, ಇತರೆ ದೇಶಗಳ ಭೂಮಿಯನ್ನು ಆತಿಕ್ರಮಣ ಮಾಡುತ್ತಿದೆ. ಭಾರತದ ಲಡಾಖ್‌ ಮಾತ್ರವಲ್ಲದೇ ಇತರೆ ನೆರೆಯ ರಾಷ್ಟ್ರಗಳ ಮೇಲೆಯೂ ದಾಳಿ ಮಾಡುತ್ತಿದೆ. ಚೀನಾದ ಆಕ್ರಮಣಶೀಲ ವರ್ತನೆಯ ವಿರುದ್ಧ ವಿಶ್ವ ಒಂದಾಗಿ ಎದುರಿಸಲು ಸಮಯ ಕೂಡಿಬಂದಿದೆ’ ಎಂದು ಅಮೆರಿಕದ ‘ಓವರ್‌ಸೀಸ್‌ ಫ್ರೆಂಡ್ಸ್‌ ಆಫ್‌ ಬಿಜೆಪಿ’ ಸಂಘಟನೆಯ ಅಡಪ ಪ್ರಸಾದ್‌ ಅವರು ಹೇಳಿದರು.

ADVERTISEMENT

ಲಡಾಖ್‌ನ ಪೂರ್ವದ ಗಾಲ್ವನ್‌ ಕಣಿವೆಯಲ್ಲಿ ಜೂನ್‌ 15ರಂದು ನಡೆದ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.

‘ಚೀನಾದ ಕಮ್ಯುನಿಸ್ಟ್ ಪಕ್ಷವು ಉಯಿಘರ್ ಸಮುದಾಯದ ಧಾರ್ಮಿಕ ಹಕ್ಕು ಮತ್ತು ಹಾಂಗ್‌ಕಾಂಗ್ ಪ್ರಜೆಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ’ ಎಂದು ಭಾರತೀಯ-ಅಮೆರಿಕನ್‌ ರಿಪಬ್ಲಿಕನ್ ಮತ್ತು ಪ್ರೌಡ್ ಅಮೆರಿಕನ್‌ ಪೊಲಿಟಿಕಲ್ ಕ್ರಿಯಾ ಸಮಿತಿಯ ಸಂಸ್ಥಾಪಕ ಪುನೀತ್ ಅಹ್ಲುವಾಲಿಯಾ ಅವರು ತಿಳಿಸಿದರು.

ಭಾರತದಲ್ಲಿ ಚೀನಾದ ಆ್ಯಪ್‌ಗಳನ್ನು ನಿಷೇಧಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಗ್ರೇಟರ್‌ ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ಭಾರತೀಯ–ಅಮೆರಿಕನ್‌ ಸಮುದಾಯದ ನಾಯಕ ಸುನೀಲ್‌ ಸಿಂಗ್‌ ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.