ADVERTISEMENT

ಅಫ್ಗಾನಿಸ್ತಾನದ ಸಂಘರ್ಷ: ‘ಮಾನವೀಯತೆ ಮೆರೆಯಿರಿ’

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 20:24 IST
Last Updated 1 ಸೆಪ್ಟೆಂಬರ್ 2021, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಶಾಂತಿ, ಸೌಹಾರ್ದ ಹಾಗೂ ಪ್ರಜಾಸತ್ತೆಯ ಸ್ಥಾಪನೆಯ ಪ್ರಯತ್ನಕ್ಕೆ ಭಾರತ ಬೆಂಬಲವಾಗಿ ನಿಲ್ಲಬೇಕು ಎಂದು ‘ಅಫ್ಗಾನಿಸ್ತಾನದ ಭಾರತೀಯ ಸ್ನೇಹಿತರು’ ಹೆಸರಿನ ವೇದಿಕೆ ಬುಧವಾರ ಮನವಿ ಮಾಡಿದೆ.

ದೋಹಾದಲ್ಲಿ ತಾಲಿಬಾನ್‌ ಜೊತೆ ಭಾರತ ಸರ್ಕಾರ ನಡೆಸಿದ ಮಾತುಕತೆಯು ಭರವಸೆ ಮೂಡಿಸಿದೆ ಎಂದು ವೇದಿಕೆ ಹೇಳಿದೆ. ಸ್ವಾತಂತ್ರ್ಯ–ಶಾಂತಿಗಾಗಿ ತುಡಿಯುತ್ತಿರುವ ಅಫ್ಗಾನಿಸ್ತಾನದ ಎಲ್ಲ ಜನರ ಬಗ್ಗೆಯೂ ವೇದಿಕೆಯು ಕಾಳಜಿ ವ್ಯಕ್ತಪಡಿಸಿದೆ.

ಶಾಂತಿ, ಸ್ವಾತಂತ್ರ್ಯ, ನ್ಯಾಯ, ವಿಶ್ವಭ್ರಾತೃತ್ವದ ಬಗ್ಗೆ ಗೌರವ ಇಟ್ಟುಕೊಂಡಿರುವ ಭಾರತ– ಅಫ್ಗಾನಿಸ್ತಾನದ ನಡುವಿನ ಬಾಂಧವ್ಯಕ್ಕೆ ದೀರ್ಘ ಇತಿಹಾಸವಿದೆ. ಹೀಗಾಗಿ ಎರಡೂ ರಾಷ್ಟ್ರಗಳು ಈ ಪ್ರಯತ್ನಕ್ಕೆ ಜೊತೆಗೂಡಬೇಕು.ಧರ್ಮಾತೀತವಾಗಿ ಅಲ್ಲಿನ ಎಲ್ಲರನ್ನೂ ರಕ್ಷಿಸಬೇಕು. ಅವರೊಂದಿಗೆ ನಿಲ್ಲುವ ಈ ಆಶಯಕ್ಕೆ, ವಸಾಹತುಶಾಹಿ ವಿರೋಧಿ ಹೋರಾಟದ ಸಂದರ್ಭದಲ್ಲಿ ಸಂಘಟಿತರಾಗಿದ್ದ ಮಹಾತ್ಮಾ ಗಾಂಧಿ ಹಾಗೂ ಖಾನ್‌ ಅಬ್ದುಲ್‌ ಗಫಾರ್‌ ಖಾನ್‌ ಅವರ ಜೋಡಿಯೇ ಅತ್ಯುತ್ತಮ ಸಂಕೇತ ಎಂದು ಅದು ಪ್ರಕಟಣೆಯಲ್ಲಿ
ಹೇಳಿದೆ.

ADVERTISEMENT

ಅಲ್ಲಿನ ಪತ್ರಕರ್ತರು, ಕಲಾವಿದರು ಹಾಗೂ ನಾಗರಿಕರಿಗೆ ಭಾರತದಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಬೇಕು. ರಾಜಕೀಯ ಪಕ್ಷಗಳು ಅಲ್ಲಿನ ಬೆಳವಣಿಗೆಯನ್ನು ಕೋಮು ಧ್ರುವೀಕರಣಕ್ಕೆ, ಚುನಾವಣಾ ಹಿತಾಸಕ್ತಿಗೆ ಬಳಸಿಕೊಳ್ಳಬಾರದು ಎಂದೂ ಮನವಿ ಮಾಡಿದೆ.

ತಾಲಿಬಾನ್‌ ಹಾಗೂ ಅಫ್ಗಾನಿಸ್ತಾನದಲ್ಲಿ ಇತರ ರಾಜಕೀಯ ಶಕ್ತಿಗಳು ಅಂತಃಕಲಹವನ್ನು ಬಿಟ್ಟು ಶಾಂತಿ ಸ್ಥಾಪನೆಯತ್ತ ಮುಖ ಮಾಡಬೇಕು. ಪ್ರತಿಯೊಬ್ಬರಿಗೂ ಸುರಕ್ಷತೆ, ಘನತೆಯ ಬದುಕು ನೀಡಿ, ದೇಶದ ಅಭಿವೃದ್ಧಿಗೆ ಗಮನ ನೀಡಬೇಕು ಎಂದು ಮನವಿ ಮಾಡಿದೆ. ಇತ್ತ ಅಂತರಾಷ್ಟ್ರೀಯ ಸಮುದಾಯವೂ ಮಾನವೀಯ ಹೊಣೆಗಾರಿಕೆಯಿಂದ ವಿಮುಖವಾಗಬಾರದು ಎಂದು ಕೇಳಿಕೊಂಡಿದೆ. ಬಿಕ್ಕಟ್ಟಿನಲ್ಲಿರುವ ಈ ದೇಶವನ್ನು ಪುನರ್‌ ನಿರ್ಮಿಸುವ ಹಾಗೂ ಶಾಂತಿ ಸ್ಥಾಪನೆಯ ಪ್ರಯತ್ನದಲ್ಲಿ, ಯಾವ ದೇಶವೂ ಹಿಂದಡಿ ಇಡಬಾರದು. ಅಸ್ತವ್ಯಸ್ತಗೊಂಡಿರುವ ದೇಶವನ್ನು ಒಂಟಿ ಮಾಡದೇ, ಮಾನವೀಯತೆ ನೆಲೆಯಲ್ಲಿ ಆ ದೇಶಕ್ಕೆ ತುರ್ತಾಗಿ ಅಗತ್ಯವಿರುವ ಬೆಂಬಲ ನೀಡಬೇಕು ಎಂದು ಮನವಿ ಮಾಡಿದೆ.

ಕೆ. ನಟವರ್ ಸಿಂಗ್‌, ಯಶವಂತ್‌ ಸಿನ್ಹಾ, ಮಣಿಶಂಕರ್‌ ಅಯ್ಯರ್‌, ನಜೀಬ್‌ ಜಂಗ್, ಲೇಖಕ ಹಾಗೂ ಅಫ್ಗಾನಿಸ್ತಾನದ ಬೆಳವಣಿಗಳ ತಜ್ಞ ಡಾ. ವೇದಪ್ರತಾಪ್‌ ವೈದಿಕ್‌, ಪೊಲೀಸ್‌ ಅಧಿಕಾರಿ ಜುಲಿಯೊ ರೆಬಿರೊ, ದಕ್ಷಿಣ ಏಷ್ಯಾ ಫೋರಂ ಸಂಸ್ಥಾಪಕ ಸುಧೀಂದ್ರ ಕುಲಕರ್ಣಿ ಅವರನ್ನೊಳಗೊಂಡ ವೇದಿಕೆಯು ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.