ADVERTISEMENT

ನ್ಯೂಯಾರ್ಕ್: ಹಡ್ಸನ್ ನದಿಯಲ್ಲಿ ಭಾರತೀಯ ಮೂಲದ ಗಣಿತಜ್ಞನ ಶವ ಪತ್ತೆ

ಪಿಟಿಐ
Published 16 ಏಪ್ರಿಲ್ 2021, 11:42 IST
Last Updated 16 ಏಪ್ರಿಲ್ 2021, 11:42 IST
ನ್ಯೂಯಾರ್ಕನ್ ಹಡ್ಸನ್ ನದಿ –ರಾಯಿಟರ್ಸ್ ಚಿತ್ರ
ನ್ಯೂಯಾರ್ಕನ್ ಹಡ್ಸನ್ ನದಿ –ರಾಯಿಟರ್ಸ್ ಚಿತ್ರ   

ನ್ಯೂಯಾರ್ಕ್: ‘ಇಲ್ಲಿನ ಹಡ್ಸನ್ ನದಿಯಲ್ಲಿ ಭಾರತೀಯ ಮೂಲದ ಯುವ ಗಣಿತಜ್ಞ ಶುವ್ರೊ ಬಿಸ್ವಾಸ್ (31) ಅವರ ಶವ ಸೋಮವಾರ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಶುವ್ರೊ ಬಿಸ್ವಾಸ್ ಅವರು ಕ್ರಿಪ್ಟೋಕರೆನ್ಸಿ ಮತ್ತು ಕೃತಕ ಬುದ್ಧಿಮತ್ತೆಯ ಕುರಿತ ಕೆಲಸದಲ್ಲಿ ತೊಡಗಿಕೊಂಡಿದ್ದರು. ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು’ ಎಂದು ನ್ಯೂಯಾರ್ಕ್‌ನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

‘ನನ್ನ ಸಹೋದರ ಶುವ್ರೊ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಕಳೆದ ವರ್ಷವೇ ಅವನ ವರ್ತನೆಯಲ್ಲಿ ಬದಲಾವಣೆ ಆಗಿದ್ದನ್ನು ಗುರುತಿಸಿ, ಅವನಿಗೆ ಮನೋಚಿಕಿತ್ಸೆಯ ಅಗತ್ಯವಿದೆಯೆಂದು ಕುಟುಂಬದವರು ತಿಳಿಸಿದ್ದೆವು. ಆದರೆ, ಆತ ಚಿಕಿತ್ಸೆ ಪಡೆಯಲು ನಿರಾಕರಿಸುತ್ತಿದ್ದ. ಈ ನಡುವೆ ನ್ಯೂರಾಲಾಜಿಸ್ಟ್ ಒಬ್ಬರ ಬಳಿಗೆ ಹೋಗುತ್ತಿದ್ದ. ಏಕೆ ಹೋಗುತ್ತಿದ್ದ ಎಂಬ ಬಗ್ಗೆ ಕುಟುಂಬದೊಂದಿಗೆ ಹಂಚಿಕೊಂಡಿರಲಿಲ್ಲ’ ಎಂದು ಶುವ್ರೊನ ಸಹೋದರ ಬಿಪ್ರೊಜಿತ್ ಬಿಸ್ವಾಸ್ ಹೇಳಿದ್ದಾರೆ.

ADVERTISEMENT

‘ಶುವ್ರೊ ಸ್ವಂತ ಉದ್ಯೋಗಿಯಾಗಿದ್ದ. ಕ್ರಿಪ್ಟೋಕರೆನ್ಸಿಯ ಸೆಕ್ಯೂರಿಟಿ ಪ್ರೋಗ್ರಾಂ ಕುರಿತು ಕೆಲಸ ಮಾಡುತ್ತಿದ್ದ. ಅಲ್ಲದೇ, ಕೃತಕ ಬುದ್ಧಿಮತ್ತೆಯ ಕುರಿತ ಕೆಲಸಗಳಲ್ಲೂ ತೊಡಗಿಕೊಂಡಿದ್ದ ಎಂದು ಆತನ ಇತ್ತೀಚಿನ ಆನ್‌ಲೈನ್ ಪ್ರೊಫೈಲ್‌ನಲ್ಲಿದೆ. ಅವನ ವೃತ್ತಿಗೆ ಬೇಕಾದ ಸಹಾಯವನ್ನು ಮಾಡುವುದಾಗಿ ನಾವು ಆತನಿಗೆ ಮನವರಿಕೆ ಮಾಡಲು ಯತ್ನಿಸಿದ್ದೆವು’ ಎಂದೂ ಬಿಸ್ವಾಸ್ ತಿಳಿಸಿದ್ದಾರೆ.

ಫೆಬ್ರುವರಿಯಲ್ಲಿ ಶುವ್ರೊ ತಾನಿದ್ದ 37ನೇ ಸ್ಟ್ರೀಟ್ ಅಪಾರ್ಟ್‌ಮೆಂಟ್‌ನಲ್ಲಿನ ಮಲಗುವ ಕೋಣೆಯಲ್ಲಿನ ಹಾಸಿಗೆಗೆ ಬೆಂಕಿ ಹಚ್ಚುವುದು, ಲಿಫ್ಟ್‌ನಲ್ಲಿ ರಕ್ತಸಿಕ್ತ ಕಲೆಗಳನ್ನು ಮೂಡಿಸುವುದು, ಗುಂಡು ಹಾರಿಸುವುದು, ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡುವವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಸೇರಿದಂತೆ ಅನೇಕ ವಿಲಕ್ಷಣ ಕೃತ್ಯಗಳನ್ನು ಮಾಡಿದ್ದ. ಈ ರೀತಿಯ ಕೃತ್ಯಗಳು ಅಪಾರ್ಟ್‌ಮೆಂಟಿನ ನಿವಾಸಿಗಳ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದು ವಕೀಲರೊಬ್ಬರು ಶುವ್ರೊ ವಿರುದ್ಧ ನ್ಯಾಯಾಲಯಕ್ಕೆ ದೂರಿದ್ದರು ಎಂದು ಮೂಲಗಳು ತಿಳಿಸಿವೆ.

ಶುವ್ರೊ ಅವರ ಸಾವು ಹೇಗೆ ಸಂಭವಿಸಿದೆ ಎನ್ನುವ ಕುರಿತು ವೈದ್ಯಕೀಯ ಮರಣೋತ್ತರ ಪರೀಕ್ಷೆಯ ನಂತರವೇ ತಿಳಿದು ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.