ADVERTISEMENT

ಅಮೆರಿಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಮೂಲದ ರಾಜಕಾರಣಿಗಳಿವರು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2025, 16:22 IST
Last Updated 5 ನವೆಂಬರ್ 2025, 16:22 IST
   

ನ್ಯೂಯಾರ್ಕ್‌: ಡೆಮಾಕ್ರಟಿಕ್‌ ಪಕ್ಷದ ಜೊಹ್ರಾನ್‌ ಮಮ್ದಾನಿ ಅವರು ನ್ಯೂಯಾರ್ಕ್‌ ನಗರದ ಮೇಯರ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಭಾರತ ಮೂಲದವರು ಎನ್ನುವ ಅಂಶ ಎಲ್ಲರ ಗಮನಸೆಳೆಯುತ್ತಿದೆ.

ವಿಶ್ವದ ದೊಡ್ಡಣ್ಣ ಎಂದು ಕರೆದುಕೊಳ್ಳುವ ಅಮೆರಿಕದ ರಾಜಕೀಯದಲ್ಲಿ ಇತ್ತೀಚೆಗೆ ಭಾರತೀಯ ಸಂಜಾತರ ಪ್ರಭಾವವು ಹೆಚ್ಚಾಗುತ್ತಿದ್ದು, ಅಲ್ಲಿನ ಪ್ರಮುಖ ಹುದ್ದೆಗಳನ್ನು ಭಾರತೀಯ ಮೂಲದ ರಾಜಕಾರಣಿಗಳು ಅಲಂಕರಿಸಿದ್ದಾರೆ.

ಅಮೆರಿಕದಲ್ಲಿನ ಭಾರತೀಯ ಮೂಲದ ಕೆಲವು ಪ್ರಮುಖ ರಾಜಕಾರಣಿಗಳ ಮಾಹಿತಿ ಇಲ್ಲಿದೆ.

ADVERTISEMENT

ಕಮಲಾ ಹ್ಯಾರಿಸ್‌: ಅಮೆರಿಕದ ಅಧ್ಯಕ್ಷೀಯ ಗಾದಿಯ ಅಭ್ಯರ್ಥಿಯಾಗಿದ್ದ ಕಮಲಾ ಹ್ಯಾರಿಸ್‌, ಅಲ್ಲಿನ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು. ಕಮಲಾ ಅವರು ಕೂಡ ಭಾರತ ಮೂಲದವರಾಗಿದ್ದು, ಅವರ ತಾಯಿ ಶ್ಯಾಮಲಾ ಗೋಪಾಲನ್‌ ಭಾರತದಿಂದ ವಲಸೆ ಹೋಗಿದ್ದರು. ಡೆಮಾಕ್ರಟಿಕ್‌ ಪಕ್ಷದ ಪ್ರಮುಖ ನಾಯಕಿಯಾಗಿರುವ ಕಮಲಾ, ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಕೂಡ ಆಗಿದ್ದರು. ಜೋ ಬೈಡನ್‌ ಅವಧಿಯಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿದ್ದರು. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ವಿರುದ್ಧ ಸೋತಿದ್ದರು. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಮತ್ತೆ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.

ವಿವೇಕ್ ರಾಮಸ್ವಾಮಿ: ರಿಪಬ್ಲಿಕನ್‌ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ 40 ವರ್ಷದ ವಿವೇಕ್ ರಾಮಸ್ವಾಮಿ ಅವರು, ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣದಲ್ಲಿದ್ದವರು. ಉದ್ಯಮಿ ಹಾಗೂ ರಾಜಕಾರಣಿಯಾಗಿ ಪ್ರಭಾವಶಾಲಿಯಾಗಿರುವ ವಿವೇಕ್, ಬಯೋಟೆಕ್‌ ಕಂಪನಿ ರೋವಂಟ್ ಸೈನ್ಸಸ್ ಸ್ಥಾಪಕರಾಗಿದ್ದಾರೆ. ಅವರ ತಂದೆ ಗಣಪತಿ ರಾಮಸ್ವಾಮಿ ಅವರು ಕೇರಳ ಮೂಲದವರಾಗಿದ್ದಾರೆ. ವಿವೇಕ್ ರಾಮಸ್ವಾಮಿ ಅವರು 2026ರಲ್ಲಿ ನಡೆಯಲಿರುವ ಓಹಿಯೋ ಗವರ್ನರ್ ಹುದ್ದೆಯ ಪ್ರಮುಖ ಅಭ್ಯರ್ಥಿಯಾಗಿದ್ದಾರೆ.

ಜೊಹ್ರಾನ್‌ ಮಮ್ದಾನಿ: ನ್ಯೂಯಾರ್ಕ್‌ ನಗರದ ನೂತನ ಮೇಯರ್‌ ಆಗಿ ಆಯ್ಕೆಯಾಗಿರುವ ಜೊಹ್ರಾನ್‌ ಮಮ್ದಾನಿ ಅವರು, ಅಲ್ಲಿನ ಅತಿ ಕಿರಿಯ ಹಾಗೂ ಮೊದಲ ಮುಸ್ಲಿಂ ಮೇಯರ್‌ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊಹ್ರಾನ್‌ ಮಮ್ದಾನಿ ಅವರಿಗೂ ಭಾರತದ ನಂಟಿದ್ದು, ಅವರ ತಾಯಿ ಮೀರಾ ನಾಯರ್‌ ಅವರು ಭಾರತದವರಾಗಿದ್ದಾರೆ. ಸಿನಿಮಾ ನಿರ್ದೇಶಕಿಯಾಗಿರುವ ಮೀರಾ ನಾಯರ್‌ ಅವರು ಒಡಿಶಾದವರಾಗಿದ್ದು, ಉಂಗಾಡ ರಾಜಕಾರಣಿ ಮಹಮೂದ್‌ ಮಮ್ದಾನಿ ಅವರನ್ನು ವರಿಸಿದ್ದರು. ಅವರ ಪುತ್ರ ಜೊಹ್ರಾನ್‌ ಮಮ್ದಾನಿ ಇದೀಗ ನ್ಯೂಯಾರ್ಕ್‌ ನಗರದ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಅಫ್ತಾಬ್ ಪುರೆವಾಲ್: ಭಾರತೀಯ ಮೂಲದ ಪುರೆವಾಲ್‌ ಅವರು ಡೆಮಾಕ್ರಟ್‌ ಪಕ್ಷದವರಾಗಿದ್ದು, 2021ರಿಂದ ಸಿನ್ಸಿನಾಟಿಯ ಮೇಯರ್ ಆಗಿದ್ದಾರೆ. ಇತ್ತೀಚೆಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರ ಸಹೋದರ ಕೋರಿ ಬೌಮನ್‌ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಸಿನ್ಸಿನಾಟಿಯ ಮೇಯರ್ ಹುದ್ದೆಗೇರಿದ್ದಾರೆ. ಪುರೆವಾಲ್‌ ಅವರ ತಾಯಿ ಟಿಬೆಟ್‌ನವರಾಗಿದ್ದು, ಸಣ್ಣ ವಯಸ್ಸಿನಲ್ಲಿಯೇ ಅಲ್ಲಿಂದ ಪಲಾಯನ ಮಾಡಿ ದಕ್ಷಿಣ ಭಾರತದ ನಿರಾಶ್ರಿತರ ಶಿಬಿರಗಳಲ್ಲಿ ಬೆಳೆದರು. ಅವರ ತಂದೆ ಪಂಜಾಬ್‌ ಮೂಲದವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.