ADVERTISEMENT

ನ್ಯೂಯಾರ್ಕ್: ಭಾರತ ಮೂಲದ ಸಿಖ್‌ ಕಾರು ಚಾಲಕನ ಮೇಲೆ ಹಲ್ಲೆ– ವ್ಯಾಪಕ ಆಕ್ರೋಶ

ಪಿಟಿಐ
Published 13 ಜನವರಿ 2022, 13:50 IST
Last Updated 13 ಜನವರಿ 2022, 13:50 IST
   

ನ್ಯೂಯಾರ್ಕ್‌:‘ಜನಾಂಗೀಯ ದ್ವೇಷದ ಹಲ್ಲೆ ಮತ್ತು ನಿಂದನೆಯಿಂದ ನಾನು ಘಾಸಿಕೊಂಡಿದ್ದೇನೆ. ಆಕ್ರೋಶ ಮೂಡುತ್ತಿದೆ. ಇಂಥ ಅನುಭವವು ಯಾರಿಗೂ ಆಗಬಾರದು’ ಎಂದು ಅಪರಿಚಿತರಿಂದ ಹಲ್ಲೆಗೊಳಗಾದಸಿಖ್‌ ಸಮುದಾಯದ, ಭಾರತ ಮೂಲದ ಕಾರು ಚಾಲಕ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯ ಸಿಖ್‌ ಸಮುದಾಯದ ಸಂಘಟನೆ ‘ಸಿಖ್‌ ಕೋಅಲೈಷನ್‌’, ಹಲ್ಲೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜ.3 ರಂದು ಸಿಖ್‌ ಕಾರು ಚಾಲಕನ ಮೇಲೆ ಆರ್‌ಎಫ್‌ಕೆ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ಹಲ್ಲೆ ನಡೆದಿತ್ತು.

‘ನನ್ನ ಕೆಲಸ ನಾನು ಮಾಡಿಕೊಂಡಿದ್ದೆ. ವಿನಾಕಾರಣ ಹಲ್ಲೆ ನಡೆಯಿತು. ನೋವಾಗಿದೆ. ಇಂಥ ಜನಾಂಗೀಯ ದ್ವೇಷದ ಅನುಭವ ಯಾರಿಗೂ ಆಗಬಾರದು. ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ವಿಶ್ವಾಸವಿದೆ’ ಎಂದು ಕಾರು ಚಾಲಕ ಪ್ರತಿಕ್ರಿಯಿಸಿದ್ದಾರೆ. ಹೆಸರು ಪ್ರಕಟಿಸದಂತೆ ಕೋರಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ADVERTISEMENT

ಈ ಬಗ್ಗೆ ಹೇಳಿಕೆ ನೀಡಿರುವ ‘ಸಿಖ್‌ ಕೋಅಲೈಷನ್‌’ ಸಂಸ್ಥೆಯು, ಕಾರು ಚಾಲಕನ ಮೇಲೆ ಬಲಪ್ರಯೋಗ ಮಾಡಿ, ನಿಂದಿಸಲಾಗಿದೆ. ರುಮಾಲು ಕಿತ್ತುಕೊಳ್ಳಲಾಗಿದೆ ಎಂದು ತಿಳಿಸಿದೆ.

ಪ್ರಯಾಣಿಕರ ನಿರೀಕ್ಷೆಯಲ್ಲಿದ್ದ ಸಿಖ್ ಸಮುದಾಯದ ಕಾರು ಚಾಲಕನ ಮೇಲೆ, ಮತ್ತೊಬ್ಬ ಕಾರು ಚಾಲಕನು ಮುಖ, ಎದೆ, ಕೈಗಳ ಮೇಲೆ ಹಲ್ಲೆ ಮಾಡಿದ್ದು, ರುಮಾಲು ಕಸಿದಿದ್ದಾನೆ. ಮತ್ತೊಬ್ಬ ವ್ಯಕ್ತಿಯು ‘ರುಮಾಲುಧಾರಿಗಳೇ’ ಎಂದು ನಿಂದಿಸಿದ್ದು, ‘ನಿಮ್ಮ ದೇಶಕ್ಕೆ ವಾಪಸು ಹೋಗಿ ಎಂದು ಕೂಗಾಡಿದ್ದಾನೆ’ ಎಂದು ಹೇಳಿಕೆಯು ತಿಳಿಸಿದೆ.

ಸಹ ಚಾಲಕರ ವರ್ತನೆ, ಕೂಗಾಟ ಗಮನಿಸಿದರೆ ಸಿಖ್‌ ಚಾಲಕರ ವಿರುದ್ಧ ತಾರತಮ್ಯ ಆಗಿರುವುದು ಗೊತ್ತಾಗಲಿದೆ ಎಂದು ಸಿಖ್‌ ಕೋಆಲೈಷನ್‌ನ ನಿರ್ದೇಶಕ (ಕಾನೂನು) ಅಮೃತ್ ಕೌರ್ ಆಕ್ರೆ ಅವರು ಪ್ರತಿಕ್ರಿಯಿಸಿದ್ದಾರೆ.

ನವಜೋತ್‌ ಪಾಲ್ ಕೌರ್ ಎಂಬವರು ಈ ಸಂಬಂಧ 26 ಸೆಕೆಂಡ್‌ಗಳ ವಿಡಿಯೊ ಅನ್ನು ಟ್ವಿಟರ್‌ನಲ್ಲಿ ಜ.4ರಂದು ಪೋಸ್ಟ್‌ ಮಾಡಿದ್ದು, ಘಟನೆ ನಡೆದಾಗ ಸ್ಥಳದಲ್ಲಿದ್ದವರು ಚಿತ್ರೀಕರಿಸಿದ ವಿಡಿಯೊ ಇದು ಎಂದಿದ್ದಾರೆ.

ಆದರೆ, ದ್ವೇಷ ಮನೋಭಾವ ನಮ್ಮ ಸಮಾಜದಲ್ಲಿ ಮುಂದುವರಿಯುತ್ತಿದೆ. ಸಿಖ್‌ ಚಾಲಕರು ಮತ್ತೆ ಮತ್ತೆ ಹಲ್ಲೆಗೆ ಒಳಗಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ ಎಂದು ತಿಳಿಸುವುದಷ್ಟೇ ಇದರ ಉದ್ದೇಶ ಎಂದು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಕಾರು ಚಾಲಕರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.