ADVERTISEMENT

73ನೇ ಗಣರಾಜ್ಯೋತ್ಸವ: ವಿದೇಶದಲ್ಲಿರುವ ಭಾರತೀಯರಿಂದ ಆಚರಣೆ

ಪಿಟಿಐ
Published 26 ಜನವರಿ 2022, 11:48 IST
Last Updated 26 ಜನವರಿ 2022, 11:48 IST
ಗಣರಾಜ್ಯೋತ್ಸವ ದಿನ
ಗಣರಾಜ್ಯೋತ್ಸವ ದಿನ   

ಬೀಜಿಂಗ್‌/ಸಿಂಗಾಪುರ: ವಿದೇಶಗಳಲ್ಲಿನ ಭಾರತೀಯರು ಬುಧವಾರ ಕೋವಿಡ್‌ ನಿರ್ಬಂಧಗಳ ನಡುವೆಯೂ ಸಂಭ್ರಮದಿಂದ 73ನೇ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್‌ ಮಾರಿಸನ್‌ ಮತ್ತು ಜಗತ್ತಿನ ಇತರ ಹಲವು ಮುಖಂಡರು ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉಸ್ತುವಾರಿ ಡಾ.ಅಕ್ವಿನೋ ವಿಮಲ್ ಅವರು ಕಚೇರಿ ಆವರಣದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಮುದ್ರಿತ ಭಾಷಣವನ್ನು ಓದಿದರು. ಕೋವಿಡ್‌ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು.

ಸಿಂಗಪುರದಲ್ಲಿರುವ ಭಾರತದ ಹೈ ಕಮಿಷನ್‌ ವರ್ಚುವಲ್‌ ರೂಪದಲ್ಲಿ ಗಣರಾಜ್ಯೋತ್ಸವ ಆಚರಿಸಿತು.

ADVERTISEMENT

ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಮಾರಿಸನ್‌ ಹಿಂದಿಯಲ್ಲಿ ಟ್ವೀಟ್‌ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

‘ಭಾರತ ಮತ್ತು ಆಸ್ಟ್ರೇಲಿಯಾ ಅತ್ಯುತ್ತಮ ಸ್ನೇಹ ಹೊಂದಿವೆ. ನಾವು ಇಂದು ಆಸ್ಟ್ರೇಲಿಯಾದ ದಿನವನ್ನು ಆಚರಿಸುತ್ತಿದ್ದೇವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರಿಗೆ ಗಣರಾಜ್ಯೋತ್ಸವದ ಶುಭ ಕೋರುತ್ತೇನೆ’ ಎಂದು ಮಾರಿಸನ್‌ ಟ್ವೀಟ್‌ ಮಾಡಿದ್ದಾರೆ.

ನೇಪಾಳದ ಪ್ರಧಾನಿ ಶೇರ್‌ ಬಹದೂರ್‌ ದೇವುಬಾ, ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ,ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಮತ್ತು ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಭಾರತೀಯರಿಗೆ ಗಣರಾಜ್ಯೋತ್ಸವ ಅಂಗವಾಗಿ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.