ADVERTISEMENT

ಭಾರತದಲ್ಲಿ ಶಿಶು ಮರಣ ಪ್ರಮಾಣ ಇಳಿಕೆ

ವಿಶ್ವಸಂಸ್ಥೆಯಿಂದ 1990–2019 ಅವಧಿಯ ಅಂಕಿ–ಅಂಶ ಬಿಡುಗಡೆ

ಪಿಟಿಐ
Published 9 ಸೆಪ್ಟೆಂಬರ್ 2020, 9:25 IST
Last Updated 9 ಸೆಪ್ಟೆಂಬರ್ 2020, 9:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ:1990–2019ರ ಅವಧಿಯಲ್ಲಿ ಭಾರತದಲ್ಲಿ ಶಿಶು ಮರಣ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದ್ದಾಗಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಆದರೆ, ಕಳೆದ ವರ್ಷ ಮೃತಪಟ್ಟ ಐದು ವರ್ಷ ಒಳಗಿನ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿದರೆ, ಮೂರನೇ ಒಂದರಷ್ಟು ಪ್ರಕರಣಗಳು ಭಾರತ ಮತ್ತು ನೈಜೀರಿಯಾದಲ್ಲಿ ವರದಿಯಾಗಿವೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ‘ಲೆವೆಲ್ಸ್‌ ಆ್ಯಂಡ್‌ ಟ್ರೆಂಡ್ಸ್‌ ಇನ್‌ ಚೈಲ್ಡ್‌ ಮೊರ್ಟಾಲಿಟಿ ರಿಪೋರ್ಟ್‌ 2020’ ಎಂಬ ವರದಿಯಲ್ಲಿ ಹೇಳಲಾಗಿದೆ.

ಆದರೆ, ಈಗ ಕೋವಿಡ್‌–19 ಪಿಡುಗು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಹೊಸ ಬೆದರಿಕೆಯೊಡ್ಡಿದೆ. ಶಿಶು ಮರಣ ಪ್ರಮಾಣದಲ್ಲಿ ಕಳೆದ ದಶಕಗಳಿಂದ ಈ ವರೆಗೆ ಸಾಧಿಸಿದ ಪ್ರಗತಿಯನ್ನು ಈ ಪಿಡುಗು ಹೊಸಕಿ ಹಾಕಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

ADVERTISEMENT

ಕಳೆದ 30 ವರ್ಷಗಳ ಅವಧಿಯಲ್ಲಿ ಆರೋಗ್ಯ ಸೇವೆ ಕ್ಷೇತ್ರದಲ್ಲಿನ ಪ್ರಗತಿ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಅವಧಿಪೂರ್ವ ಜನನ, ಕಡಿಮೆ ತೂಕದೊಂದಿಗೆ ಜನನ, ನ್ಯುಮೋನಿಯಾ, ಸೆಪ್ಸಿಸ್‌, ಅತಿಸಾರ, ಮಲೇರಿಯಾ ಸೇರಿದಂತೆ ಮತ್ತಿತರ ತೊಂದರೆಗಳು ಶಿಶು ಮರಣಕ್ಕೆ ಪ್ರಮುಖ ಕಾರಣವಾಗಿದ್ದವು. ಪರಿಣಾಮಕಾರಿ ಚಿಕಿತ್ಸೆ, ಲಸಿಕೆ ಕಂಡುಹಿಡಿದಿದ್ದರಿಂದ ಲಕ್ಷಾಂತರ ಮಕ್ಕಳ ಜೀವ ಉಳಿಸಲು ಸಾಧ್ಯವಾಯಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಂಕಿ–ಅಂಶ (ಭಾರತಕ್ಕೆ ಸಂಬಂಧಿಸಿದ್ದವು)

*1990ರಲ್ಲಿ ಜನಿಸಿದ ಪ್ರತಿ ಸಾವಿರ ಶಿಶುಗಳ ಪೈಕಿ ಮರಣ ಹೊಂದಿದ ಶಿಶುಗಳ ಸಂಖ್ಯೆ- 126

* 2019ರಲ್ಲಿ ಜನಿಸಿದ ಪ್ರತಿ ಸಾವಿರ ಶಿಶುಗಳ ಪೈಕಿ ಮರಣ ಹೊಂದಿದ ಶಿಶುಗಳ ಸಂಖ್ಯೆ-34

* 1990ರಲ್ಲಿ ಮೃತಪಟ್ಟ ಐದು ವರ್ಷ ಒಳಗಿನ ಮಕ್ಕಳ ಸಂಖ್ಯೆ-34 ಲಕ್ಷ

* 2019ರಲ್ಲಿ ಮೃತಪಟ್ಟ ಐದು ವರ್ಷ ಒಳಗಿನ ಮಕ್ಕಳ ಸಂಖ್ಯೆ-8.24 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.