ADVERTISEMENT

ಇಂಡೊನೇಷ್ಯಾ: ಜೆಟ್ ಇಂಧನಕ್ಕೆ ತಾಳೆ ಎಣ್ಣೆ ಮಿಶ್ರಣ–ವಿಮಾನ ಹಾರಾಟ ಪರೀಕ್ಷೆ ಯಶಸ್ವಿ

ರಾಯಿಟರ್ಸ್
Published 6 ಅಕ್ಟೋಬರ್ 2021, 8:18 IST
Last Updated 6 ಅಕ್ಟೋಬರ್ 2021, 8:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಕಾರ್ತ: ಜೆಟ್ ಇಂಧನಕ್ಕೆ ತಾಳೆ ಎಣ್ಣೆಯನ್ನು (ಪಾಮ್‌ ಆಯಿಲ್‌) ಭಾಗಶಃ ಮಿಶ್ರಮಾಡಿ ವಿಮಾನ ಹಾರಾಟ ನಡೆಸುವ ಇಂಡೋನೇಷ್ಯಾದ ಪ್ರಥಮ ಪರೀಕ್ಷೆ ಸಫಲವಾಗಿದೆ.

ತಾಳೆ ಎಣ್ಣೆ ಮಿಶ್ರಣಮಾಡಿದ ಜೆಟ್‌ ಇಂಧನ ತುಂಬಿದ್ದವಿಮಾನವು ಬುಧವಾರ ರಾಜಧಾನಿ ಜಕಾರ್ತದಿಂದ 100 ಕಿ.ಮೀ.ದೂರದಬಾಂಡುಂಗ್‌ ನಗರಕ್ಕೆ ಯಶಸ್ವಿಯಾಗಿ ಪ್ರಯಾಣಿಸಿತು.

‘ದೇಶದಲ್ಲಿ ಇಂಧನವನ್ನು ವಾಣಿಜ್ಯೀಕರಣಗೊಳಿಸಲು ಯೋಚಿಸುತ್ತಿರುವ ಸಂದರ್ಭದಲ್ಲಿ ಖಾದ್ಯ ತೈಲವನ್ನು ದೇಶೀಯ ವಿಮಾನಗಳಿಗೆ ಇಂಧನವಾಗಿಸುವಂತಹ ಕ್ರಿಯಾಶೀಲ ದಾರಿಗಳನ್ನು ಹುಡುಕುವುದು ಅಗತ್ಯವಾಗಿದೆ‘ ಎಂದು ಹಣಕಾಸು ಸಚಿವ ಐರ್ಲಾಂಗ್ ಹರ್ತಾರೊತೊ ಪ್ರತಿಪಾದಿಸಿದರು.

ADVERTISEMENT

‌ಇಂಡೋನೇಷ್ಯಾ ಪ್ರಸ್ತುತ ಜೈವಿಕ ಇಂಧನ ಬಳಕೆಯನ್ನು ಕಡ್ಡಾಯಗೊಳಿಸುತ್ತಿದೆ. ಇಂಧನದೊಂದಿಗೆ ಶೇ 30ರಷ್ಟು ತಾಳೆ ಎಣ್ಣೆ ಬಳಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕೆ ‘ಬಿ30‘ ಎಂದು ಕರೆಯಲಾಗುತ್ತದೆ.

ಪ್ರಸ್ತುತ ಪರೀಕ್ಷಾರ್ಥ ಹಾರಾಟದ ವೇಳೆ ಜೈವಿಕ ಜೆಟ್‌ ಇಂಧನದಲ್ಲಿ ಶೇ 2.4ರಷ್ಟು ತಾಳೆ ಎಣ್ಣೆ ಅಂಶವನ್ನು ಸೇರಿಸಲಾಗಿದೆ. 2015ರ ನಿಯಮದ ಪ್ರಕಾರ ಇಂಡೋನೇಷ್ಯಾ ಈ ಪ್ರಮಾಣವನ್ನು 2025ರ ವೇಳೆ ಶೆ 5ರವರೆಗೆ ಕಡ್ಡಾಯವಾಗಿ ಹೆಚ್ಚಿಸಬೇಕಿದೆ.

ಪರಿಸರವಾದಿಗಳ ವಿರೋಧ: ಅಧಿಕ ಪ್ರಮಾಣದಲ್ಲಿ ತಾಳೆ ಎಣ್ಣೆ ಬೆಳೆಯುವುದರಿಂದ ಅರಣ್ಯ ಪ್ರದೇಶ ನಾಶವಾಗುತ್ತದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ತಾಳೆ ಎಣ್ಣೆ ಮಿಶ್ರಿತ ಡೀಸೆಲ್‌ ಅನ್ನು ನಿಷೇಧಿಸಲು ಐರೋಪ್ಯ ಸಮುದಾಯ ಚಿಂತನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.