
ಜಮ್ಮು ಮತ್ತು ಕಾಶ್ಮೀರದಲ್ಲಿನ ರಿಯಾಸಿಯಲ್ಲಿನ ಅಣೆಕಟ್ಟೆ
ಪಿಟಿಐ ಚಿತ್ರ
ಇಸ್ಲಾಮಾಬಾದ್: ‘ಸಿಂಧೂ ನದಿ ನೀರು ಒಪ್ಪಂದ (ಐಡಬ್ಲ್ಯೂಟಿ)ದದ ಅಡಿಯಲ್ಲಿ ಪಶ್ಚಿಮ ನದಿಗಳ ನೀರಿನ ನಿರ್ಬಂಧಿತ ಅವಕಾಶವನ್ನು ಭಾರತವು ದುರುಪಯೋಗಪಡಿಸಿಕೊಳ್ಳುವಂತಿಲ್ಲ’ ಎಂದು ಪಾಕಿಸ್ತಾನ ಹೇಳಿದೆ.
ಕಾಶ್ಮೀರದ ಚೆನಾಬ್ ನದಿಗೆ 260 ಮೆಗಾವಾಟ್ ಸಾಮರ್ಥ್ಯದ ‘ದುಲ್‌ಹಸ್ತಿ ಜಲವಿದ್ಯುತ್ ಯೋಜನೆ’ಯ 2ನೇ ಹಂತಕ್ಕೆ ಭಾರತವು ಅನುಮತಿ ನೀಡಿರುವ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ತಾಹೀರ್ ಹುಸೈಬ್ ಅಂದ್ರಾಬಿ ಈ ರೀತಿ ಉತ್ತರಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತವು ಹಲವು ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿರಿಸಿದೆ. ಸಿಂಧೂ ನದಿ ಹಾಗೂ ಅವುಗಳ ಉಪನದಿಗಳ ನೀರು ಹಂಚಿಕೆ ಹಾಗೂ ಬಳಕೆಗೆ ಸಂಬಂಧಿಸಿ 1960ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಒಪ್ಪಂದ ನಡೆದಿತ್ತು.
‘ದುಲ್‌ಹಸ್ತಿ ಜಲವಿದ್ಯುತ್ ಯೋಜನೆ’ಯ 2ನೇ ಹಂತಕ್ಕೆ ಭಾರತವು ಅನುಮತಿ ನೀಡಿದ ಕುರಿತು ಮಾಧ್ಯಮಗಳ ವರದಿಯನ್ನು ಗಮನಿಸಿದ್ದೇವೆ. ಈ ವಿಷಯದ ಕುರಿತು ಪಾಕಿಸ್ತಾನಕ್ಕೆ ಮುಂಚಿತವಾಗಿ ಯಾವುದೇ ಮಾಹಿತಿ ಹಾಗೂ ಅಧಿಸೂಚನೆ ಹೊರಡಿಸದೇ ಯೋಜನೆ ಕೈಗೆತ್ತಿಕೊಂಡಿರುವುದು ಗಂಭೀರ ಕಳವಳದ ವಿಚಾರವಾಗಿದೆ. ಭಾರತದಿಂದ ಈ ಕುರಿತು ಮಾಹಿತಿಯನ್ನು ಕೋರಲಾಗಿದೆ’ ಎಂದು ಅಂದ್ರಾಬಿ ತಿಳಿಸಿದ್ದಾರೆ.
‘ದುಲ್‌ಹಸ್ತಿ ಜಲವಿದ್ಯುತ್ ಯೋಜನೆಯ ಸ್ವರೂಪ, ವ್ಯಾಪ್ತಿ ಹಾಗೂ ತಾಂತ್ರಿಕ ಅಂಶದ ಕುರಿತಂತೆ ಸಿಂಧೂ ನದಿಯ ಪಾಕಿಸ್ತಾನದ ಕಮಿಷನರ್ ಅವರು ಭಾರತದಿಂದ ಮಾಹಿತಿ ಕೋರಿದ್ದಾರೆ. ಇದು ನದಿಗೆ ಈಗಾಗಲೇ ಜಾರಿಯಲ್ಲಿರುವ ಯೋಜನೆಯೇ, ಮಾರ್ಪಡಿಸಿದ್ದೇ ಅಥವಾ ವಿಸ್ತರಿಸಿದ ಯೋಜನೆಯೇ ಎಂಬುದರ ಕುರಿತು ಮಾಹಿತಿ ಪಡೆದಿದ್ದಾರೆ’ ಎಂದು ಅಂದ್ರಾಬಿ ಹೇಳಿದ್ದಾರೆ.
‘ಪಶ್ಚಿಮ ನದಿಗೆ ಸಂಬಂಧಿಸಿದ ಯಾವುದೇ ಯೋಜನೆಯ ವಿನ್ಯಾಸ ಹಾಗೂ ನಿಯಂತ್ರಣ ಹಾಗೂ ಮಾಹಿತಿ ಹಂಚಿಕೆಯೂ ಪಾಕಿಸ್ತಾನಕ್ಕೆ ನೀಡುವುದು ಕಡ್ಡಾಯ. ಇದು ಅಂತರರಾಷ್ಟ್ರೀಯ ಒಪ್ಪಂದವಾಗಿದ್ದು, ಶಾಂತಿಯುತ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ನಮ್ಮ ಅಸ್ತಿತ್ವದ ನೀರಿನ ಹಕ್ಕುಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.