ADVERTISEMENT

ಇನ್ಫೊಸಿಸ್‌ ಸೇವಾ ಕೇಂದ್ರ ರಷ್ಯಾದಿಂದ ಸ್ಥಳಾಂತರ?

ಪಿಟಿಐ
Published 3 ಏಪ್ರಿಲ್ 2022, 14:31 IST
Last Updated 3 ಏಪ್ರಿಲ್ 2022, 14:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇನ್ಫೊಸಿಸ್‌ ಕಂಪನಿಯು ರಷ್ಯಾದಿಂದ ನೀಡುವ ತನ್ನ ಸೇವೆಗಳನ್ನು ಬೇರೆ ದೇಶಗಳಲ್ಲಿ ಇರುವ ಸೇವಾ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಇನ್ಫೊಸಿಸ್‌ನಲ್ಲಿ ಷೇರು ಹೊಂದಿದ್ದಾರೆ. ಈ ವಿಚಾರವಾಗಿ ಸುನಕ್ ಅವರು ಈಚೆಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಮಾಧ್ಯಮಗಳಿಂದ ಕೆಲವು ಕಠಿಣ ಪ್ರಶ್ನೆಗಳನ್ನು ಅವರು ಎದುರಿಸಿದ್ದಾರೆ. ಈ ಬೆಳವಣಿಗೆಯ ನಡುವೆ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿವೆ.

ಕಂಪನಿಯು ತನ್ನ ಸೇವೆಗಳನ್ನು ರಷ್ಯಾದಿಂದ ಇತರ ಜಾಗತಿಕ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದೆ ಎಂದಷ್ಟೇ ಮೂಲಗಳು ಹೇಳಿವೆ. ಈ ಕುರಿತಾಗಿ ಹೆಚ್ಚಿನ ವಿವರ ನೀಡಿಲ್ಲ. ಕಂಪನಿಯು ರಷ್ಯಾದಲ್ಲಿ 100ಕ್ಕೂ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ. ಅಲ್ಲಿನ ಸ್ಥಳೀಯ ಸಿಬ್ಬಂದಿಯ ಸ್ಥಿತಿಗತಿ ಮತ್ತು ಅವರನ್ನು ಕೂಡ ಸ್ಥಳಾಂತರಿಸಲಾಗುತ್ತದೆಯೇ ಎಂಬುದನ್ನು ಖಚಿಪಡಿಸಿಕೊಳ್ಳಲು ಆಗಿಲ್ಲ.

ADVERTISEMENT

ಈ ಬೆಳವಣಿಗೆಯ ಕುರಿತು ಸುದ್ದಿಸಂಸ್ಥೆ ಕಳುಹಿಸಿದ ಇ–ಮೇಲ್‌ಗೆ ‘ಯಾವುದೇ ಪ್ರತಿಕ್ರಿಯೆ ಇಲ್ಲ’ ಎಂದು ಇನ್ಫೊಸಿಸ್‌ ಹೇಳಿದೆ.

ರಷ್ಯಾದ ವ್ಯವಹಾರಗಳು ಮತ್ತು ವ್ಯಕ್ತಿಗಳ ಮೇಲೆ ಬ್ರಿಟನ್‌ ವ್ಯಾಪಕ ನಿರ್ಬಂಧಗಳನ್ನು ವಿಧಿಸಿದೆ. ಉಕ್ರೇನ್‌ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಯಾವುದೇ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಯೋಚಿಸುವಂತೆ ಸುನಕ್ ಅವರು ಬ್ರಿಟನ್‌ನ ಕಂಪನಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.

ಸುನಕ್ ಅವರು ಇನ್ಫೊಸಿಸ್‌ನ ಸಹಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ. ರಷ್ಯಾದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿರುವುದನ್ನು ಉಲ್ಲೇಖಿಸಿ, ಸುನಕ್ ಅವರಲ್ಲಿ, ‘ನಿಮ್ಮ ಸಲಹೆಗಳು ಕುಟುಂಬಕ್ಕೆ ಅನ್ವಯ ಆಗುವುದಿಲ್ಲವೇ’ ಎಂದು ಸಂದರ್ಶನವೊಂದರಲ್ಲಿ ಪ್ರಶ್ನಿಸಲಾಗಿತ್ತು. ಕಂಪನಿಗಳು ಕೈಗೊಳ್ಳುವ ತೀರ್ಮಾನಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು.

ಕಂಪನಿಯು ರಷ್ಯಾದ ಮೂಲದ ಉದ್ಯೋಗಿಗಳ ಸಣ್ಣ ತಂಡವನ್ನು ಹೊಂದಿದೆ. ಅದು ಕೆಲವು ಜಾಗತಿಕ ಗ್ರಾಹಕರಿಗೆ ಸ್ಥಳೀಯವಾಗಿ ಸೇವೆ ಸಲ್ಲಿಸುತ್ತದೆ. ರಷ್ಯಾದ ಉದ್ದಿಮೆಗಳ ಜೊತೆ ಸಕ್ರಿಯ ವಾಣಿಜ್ಯ ಸಂಬಂಧ ಇಲ್ಲ ಎಂದು ಇನ್ಫೊಸಿಸ್ ವಿವರಣೆ ನೀಡಿತ್ತು. ರಷ್ಯಾ–ಉಕ್ರೇನ್‌ ಯುದ್ಧದ ಸಂತ್ರಸ್ತರಿಗಾಗಿ ₹ 7.62 ಕೋಟಿ ಮೀಸಲಿಡುತ್ತಿರುವುದಾಗಿ ಕಂಪನಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.